×
Ad

ಹೊರರಾಜ್ಯದವರಿಗೆ ಕ್ವಾರಂಟೈನ್: ಸಿದ್ಧತೆ ಕುರಿತು ಸಭೆ

Update: 2020-05-08 22:38 IST

ಉಡುಪಿ, ಮೇ 8: ಹೊರ ರಾಜ್ಯದಿಂದ ಬಂದ ಪ್ರಯಾಣಿಕರನ್ನು ಜಿಲ್ಲೆಯಲ್ಲಿ ಇನ್‌ಸ್ಟಿಟ್ಯೂಶನ್ ಹಾಗೂ ಹೊಟೇಲ್ ಕ್ವಾರಂಟೈನ್ ಮಾಡುವ ಬಗ್ಗೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಉಡುಪಿ ತಾಪಂ ಸಭಾಭವನದಲ್ಲಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸೇವಾ ಸಿಂಧು ಆನ್‌ಲೈನ್ ಅರ್ಜಿ ಸಲ್ಲಿಸಿ ಪಾಸ್ ಮೂಲಕ ಹೊರರಾಜ್ಯದಿಂದ ಬಂದ ಪ್ರಯಾಣಿಕರನ್ನು ಜಿಲ್ಲಾ ಗಡಿಯಲ್ಲಿ ತಾಲೂಕುವಾರು ವಿಂಗಡಿಸಿ, ಅವರನ್ನು ಇನ್‌ಸ್ಟಿಟ್ಯೂಷನ್ ಅಥವಾ ಹೋಟೆಲ್ ಕ್ವಾರೈಂಟೈನ್ನಲ್ಲಿ ಇರಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.

ಪ್ರಾರಂಭಿಕ ಹಂತದಲ್ಲಿ ಇನ್‌ಸ್ಟಿಟ್ಯೂಷನ್ ಕ್ವಾರೈಂಟೈನ್‌ನಲ್ಲಿ ಇರಿಸುವ ಬಗ್ಗೆ ತಾಲೂಕು ಆಡಳಿತವು ಇತರ ಇಲಾಖೆಯ ಸಮನ್ವಯದೊಂದಿಗೆ ಹಾಸ್ಟೆಲ್, ವಸತಿ ಶಾಲೆ, ಸಭಾಭವನ ಮತ್ತು ಛತ್ರಗಳನ್ನು ಮೂಲಭೂತ ಸೌಕರ್ಯ ಗಳೊಂದಿಗೆ ಸಜ್ಜಾಗಿರಿಸಬೇಕು. ನಂತರ ಹೊರ ರಾಜ್ಯಗಳಿಂದ ಬಂದವರನ್ನು ಈ ಇನ್‌ಸ್ಟ್ಟಿಟ್ಯೂಷನ್ ಕ್ವಾರೈಂಟೈನ್ನಲ್ಲಿ ಇರಿಸಿ ಮೂಲಭೂತ ಅವಶ್ಯಕತೆ ಗಳನ್ನು ತಾಲೂಕು ಆಡಳಿತದ ಮೂಲಕ ಪೂರೈಸಬೇಕು ಎಂದು ಸಭೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಉಡುಪಿ ತಾಲೂಕಿನ ಹೋಟೆಲ್ ಮಾಲಕರಲ್ಲ್ಲಿ ಹೊರರಾಜ್ಯದಿಂದ ಬರುವ ಪ್ರಯಾಣಿಕರಿಗೆ ದಿನದ ವಿಶೇಷ ಪ್ಯಾಕೇಜ್ ದರದಲ್ಲಿ ವಸತಿ ಸೌಕರ್ಯವನ್ನು ಮತ್ತು ಊಟದ ವ್ಯವಸ್ಥೆಯನ್ನು ನೀಡುವ ಬಗ್ಗೆ ಪ್ರಸ್ತಾಪಿಸಲಾಯಿತು.

ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಣಾಧಿಕಾರಿ ಮೋಹನ್ ರಾಜ್, ನಗರಸಭಾ ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ನಾಗರತ್ನ ಹಾಗೂ ಮಲ್ಪೆ, ಉಡುಪಿ ಪೊಲೀಸ್ ಠಾಣೆಯ ಉಪನಿರೀಕ್ಷಕರು ಮತ್ತು ಉಡುಪಿ ತಾಲೂಕು ಮಟ್ಟದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News