×
Ad

ಬಾರ್ ಸಹಿತ 296 ಸನ್ನದುಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ

Update: 2020-05-08 22:40 IST

ಉಡುಪಿ, ಮೇ 8: ಲಾಕ್‌ಡೌನ್‌ನಿಂದಾಗಿ ಕಳೆದ 45 ದಿನಗಳಿಂದ ಮುಚ್ಚಲಾಗಿರುವ ಬಾರ್ ಸಹಿತ ಇತರ ಸನ್ನದುಗಳಲ್ಲಿ ಉಳಿದಿರುವ ಮದ್ಯ ಹಾಗೂ ಬಿಯರ್‌ಗಳನ್ನು ಮಾರಾಟ ಮಾಡಲು ಸರಕಾರ ಅನುಮತಿ ನೀಡಿದ್ದು, ಅದರಂತೆ ಉಡುಪಿ ಜಿಲ್ಲೆಯಲ್ಲಿ ಬಾರ್ ಸಹಿತ 296 ಇತರ ಸನ್ನದುಗಳು ನಾಳೆಯಿಂದ ಮದ್ಯ ಮಾರಾಟ ಮಾಡಲಿದೆ.

ಮೇ 4ರಿಂದ ಜಿಲ್ಲೆಯ 14 ಎಂಎಸ್‌ಐಎಲ್ ಮಳಿಗೆ ಹಾಗೂ 89 ವೈನ್‌ಶಾಪ್‌ಗಳು ಸೇರಿದಂತೆ ಒಟ್ಟು 103 ಮಳಿಗೆಗಳಲ್ಲಿ ಮದ್ಯ ಮಾರಾಟ ಆರಂಭಗೊಂಡಿದ್ದು, ಉಳಿದ 296 ಬಾರ್ ಸಹಿತ ಇತರ ಸನ್ನದುಗಳಲ್ಲಿ ಮೇ 9 ಅಥವಾ ಮೇ 10ರಿಂದ ಮದ್ಯ ಮಾರಾಟ ನಡೆಯಲಿದೆ.

ಈಗಾಗಲೇ ಈ ಬಾರ್ ಸಹಿತ ಇತರ ಸನ್ನದುಗಳನ್ನು ಸ್ಯಾನಿಟೈಜರ್ ಮಾಡಲು ಅಬಕಾರಿ ಇಲಾಖೆ ಸೂಚನೆ ನೀಡಿದ್ದು, ಅದರಂತೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಇಲ್ಲಿ ಈಗಾಗಲೇ ದಾಸ್ತಾನು ಇರುವ ಮದ್ಯ ಮತ್ತು ಬಿಯರ್‌ಗಳನ್ನು ಎಂಆರ್‌ಪಿ ದರದಲ್ಲಿ ಮಾರಾಟ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಇಲ್ಲಿರುವ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಪಾರ್ಸೆಲ್ ಮೂಲಕ ತಿಂಡಿಗಳನ್ನು ನೀಡಬಹುದಾಗಿದೆ ಎಂದು ಉಡುಪಿ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News