ಬಟ್ಟೆಬರೆ ಖರೀದಿ ಬದಲು ಬಡವರಿಗೆ ನೆರವಾಗುವ ಮೂಲಕ ಈದ್ ಆಚರಿಸೋಣ: ಅಶ್ರಫ್ ವಿ.ಎಚ್. ಮನವಿ

Update: 2020-05-08 17:32 GMT

ಬಂಟ್ವಾಳ, ಮೇ 8: ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಲವು ಕುಟುಂಬಗಳು ತುತ್ತು ಅನ್ನಕ್ಕೂ ಕಷ್ಟಪಡುತ್ತಿವೆ. ಹೀಗಾಗಿ ಈ ಬಾರಿಯ ಈದುಲ್ ಫಿತ್ರ್ ಅನ್ನು ಬಟ್ಟೆಬರೆ ಖರೀದಿಸದೆ, ದುಂದುವೆಚ್ಚವನ್ನೂ ಮಾಡದೆ ಗರಿಷ್ಠ ಮಟ್ಟದಲ್ಲಿ ಬಡವರಿಗೆ ನೆರವಾಗುವ ಮೂಲಕ ಸರಳವಾಗಿ ಆಚರಿಸಬೇಕು ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಬಂಟ್ವಾಳ ಇದರ ಅಧ್ಯಕ್ಷ ಅಶ್ರಫ್ ವಿ.ಎಚ್. ವಿಟ್ಲ ಮನವಿ ಮಾಡಿದ್ದಾರೆ.

ಕೆಲವು ದಿನಗಳಿಂದ ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹೀಗಿದ್ದರೂ ಒಂದೂವರೆ ತಿಂಗಳ ಕಾಲ ಇದ್ದ ಲಾಕ್‍ಡೌನ್ ದಿಢೀರ್ ಆಗಿ ಸಡಿಲಗೊಳಿಸಲಾಗಿದೆ. ಜನಸಾಮಾನ್ಯರ ಬದುಕಿಗೆ ನೆರವಾಗಲು ಸಾಧ್ಯವಾಗದ ಸರಕಾರ ಬಟ್ಟೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದ್ದು ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಈ ವರೆಗೆ ಹೇರಲಾಗಿದ್ದ ಲಾಕ್‍ಡೌನ್ ವ್ಯರ್ಥವಾಗಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬಟ್ಟೆ ಅಂಗಡಿಗಳ ಓಲ್ಡ್ ಸ್ಟಾಕ್ ಖಾಲಿ ಮಾಡಲು ಕೆಲವರು ಮಾಡಿರುವ ಕುತಂತ್ರಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಮಣಿದಿದ್ದಾರೆ. ಆದರೆ ಮುಸ್ಲಿಮರು ಇದಕ್ಕೆ ವಿರುದ್ಧವಾದ ನಿಲುವನ್ನು ತಾಲಬೇಕು. ಇನ್ನು ಬಾಕಿ ಇರುವ 15 ದಿನಗಳಲ್ಲಿ ಬಟ್ಟೆಬರೆ ಖರೀದಿಯ ಭರದಲ್ಲಿ ಸುರಕ್ಷಿತ ಅಂತರವಿಲ್ಲದೆ ಜನರು ಮುಗಿಬಿದ್ದರೆ ಕೊರೋನ ಸೋಂಕು ಇನ್ನಷ್ಟು ಹರಡುವ ಅಪಾಯವಿದೆ. ಹಾಗಾಗಿ ಜನರು ಬಟ್ಟೆಬರೆ ಖರೀದಿಯನ್ನು ಬಿಟ್ಟು ಸರಳವಾಗಿ ಈದ್ ಆಚರಿಸಬೇಕು. ಈ ಬಗ್ಗೆ ಈಗಾಗಲೇ ಇಬ್ಬರು ಖಾಝಿಗಳು ನೀಡಿರುವ ಸಲಹೆಗಳನ್ನು ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.

ಲಾಕ್‍ಡೌನ್‍ನಿಂದ ದಿನ ಕೂಲಿ ಮಾಡಿ ಜೀವನ ಸಾಗಿಸುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ಈಗಾಗಲೇ ವಿವಿಧ ಸಂಘಸಂಸ್ಥೆಗಳು, ಜಮಾಅತ್ ಕಮಿಟಿಗಳು ನೀಡಿದ ಆಹಾರ ಸಾಮಗ್ರಿಗಳು ಮುಗಿದಿರಬಹುದು. ಹೀಗಾಗಿ ಈದ್ ದಿನ ಅವರು ಕೂಡಾ ವಿಶೇಷ ಅಡುಗೆ ತಯಾರಿಸಿ ಈದ್ ಆಚರಿಸುವಂತಾಗಬೇಕು. ಇದಕ್ಕಾಗಿ ಗರಿಷ್ಠ ಮಟ್ಟದಲ್ಲಿ ಬಡವರಿಗೆ ನೆರವಾಗುವ ಮೂಲಕ ಈದ್ ಸಂಭ್ರಮವನ್ನು ಹಂಚಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News