×
Ad

​ಬಿಜೆಪಿಯ ಒತ್ತಡಕ್ಕೆ ಮಣಿದು ಜನರನ್ನು ಬಲಿ ತೆಗೆಯುತ್ತಿರುವ ದ.ಕ ಜಿಲ್ಲಾಡಳಿತ: ಎಸ್‌ಡಿಪಿಐ ಆರೋಪ

Update: 2020-05-08 23:26 IST

ಮಂಗಳೂರು, ಮೇ 8: ಕೊರೋನ ವೈರಸ್ ಸೋಂಕು ಭಾರತಕ್ಕೆ ಕಾಲಿಟ್ಟು ಲಾಕ್‌ಡೌನ್ ಹೇರಿದ ಬಳಿಕ ದ.ಕ ಜಿಲ್ಲಾಡಳಿತ ತೆಗೆಯುತ್ತಿರುವಂತಹ ಒಂದೊಂದು ತೀರ್ಮಾನಗಳು ಕೂಡ ಸಂಘಪರಿವಾರದ ಹಿಡನ್ ಅಜೆಂಡಾವನ್ನು ಈಡೇರಿಸುವ ಮತ್ತು ಬಿಜೆಪಿಯ ರಾಜಕೀಯ ಒತ್ತಡಕ್ಕೆ ಬಲಿಯಾಗಿ ತೆಗೆದುಕೊಳ್ಳುತ್ತಿರುವ ತೀರ್ಮಾನದಂತೆ ಭಾಸವಾಗುತ್ತಿದೆ ಎಂದು ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆರೋಪಿಸಿದ್ದಾರೆ.

ಲಾಕ್‌ಡೌನ್ ಹೇರಿದ ಸಂದರ್ಭ ಪಾಸಿಟಿವ್ ಪ್ರಕರಣಗಳು ಸಿಕ್ಕಿದ ಪ್ರದೇಶಗಳನ್ನು ಸಂಪೂರ್ಣವಾಗಿ ಸೀಲ್ಡೌನ್ ಕಟ್ಟೆಚ್ಚರಿಕೆ ವಹಿಸಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಆದರೆ ಇದಕ್ಕಿಂತಲೂ ಗಂಭೀರವಾದ ಪ್ರಕರಣಗಳು ನಡೆದು ಚೈನ್ ಲಿಂಕ್ ತರ ಈ ವೈರಸ್‌ನಿಂದ ಮೂವರು ಪ್ರಾಣಕಳಕೊಂಡರು. ಆದರೆ ಅದರ ಮೂಲವನ್ನು ಪತ್ತೆಹಚ್ಚಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳಿಂದ ಅಪಸ್ವರ ವ್ಯಕ್ತವಾದ ಬಳಿಕ ಇದೀಗ ಮೂಲವನ್ನು ಪತ್ತೆ ಹಚ್ಚಲು ಜಿಲ್ಲಾ ಉಸ್ತುವಾರಿ ಸಚಿವರು ಕಾಟಾಚಾರದ ಆದೇಶ ನೀಡಿ ಮೌನ ವಹಿಸಿರುವುದೆಲ್ಲವನ್ನು ಗಮನಿಸುವಾಗ ಇದೆಲ್ಲಾವು ಒಂದು ನಾಟಕದಂತೆ ಮೇಲ್ನೋಟಕ್ಕೆ ಬಿಂಬಿತವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಪಡೀಲ್ ಫರ್ಸ್ಟ್ ನ್ಯೂರೋ ಆಸ್ಪತ್ರೆಯ ಮತ್ತು ಬಂಟ್ವಾಳ ಪೇಟೆಯ ಸುತ್ತಮುತ್ತಲೂ ಹೇರಿದ ಸೀಲ್ಡೌನ್ ಕೇವಲ ಹೆಸರಿಗೆ ಮಾತ್ರ ಸೀಮಿತವಾದಂತಿದೆ. ಇಲ್ಲಿಯ ಜನರ ಓಡಾಟ ಮತ್ತು ಈ ಹಿಂದಿನ ಸೀಲ್ಡೌನ್ ಹೇರಿದ ಪ್ರದೇಶಗಳಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಪಾಸಿಟಿವ್ ಪ್ರಕರಣ ಹೆಚ್ಚಳವಾಗದಂತೆ ನೋಡಿಕೊಳ್ಳಬೇಕಾದ ಜಿಲ್ಲಾಡಳಿತವು ಜನರ ಜೀವಕ್ಕಿಂತಲು ಮಿಗಿಲಾಗಿ ಬಂಡವಾಳಶಾಹಿಗಳ ವ್ಯಾಪಾರ ವ್ಯವಹಾರಕ್ಕೆ ಒತ್ತು ಕೊಟ್ಟಿರುವುದು ತೀರಾ ಅವೈಜ್ಞಾನಿಕ ಮತ್ತು ಅಪಾಯಕಾರಿ ನಿರ್ಧಾರವಾಗಿದೆ.

ಜಿಲ್ಲಾಡಳಿತ ದೊಡ್ಡ ದೊಡ್ಡ ವ್ಯಾಪಾರಸ್ಥರ ಲಾಬಿಗೆ ಮಣಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಒಂದುವರೆ ತಿಂಗಳಿನಿಂದ ವೈರಸ್ ತಡೆಗಟ್ಟುವ ಉದ್ದೇಶದಿಂದ ಎಲ್ಲಾ ಧರ್ಮದ ಧಾರ್ಮಿಕ ನಾಯಕರು, ಸಾಮಾಜಿಕ ನೇತಾರರು ಜನರ ಆರೋಗ್ಯದ ಹಿತದೃಷ್ಟಿಯಿಂದ ಮಸೀದಿ, ಮಂದಿರ,ಚರ್ಚ್‌ಗಳನ್ನು ಮುಚ್ಚಿ ಸರಕಾರದ ಲಾಕ್‌ಡೌನ್‌ಗೆ ಬದ್ಧರಾಗಿರುವಾಗ ಜಿಲ್ಲಾಡಳಿತವು ಏಕಾಏಕಿ ಅವೈಜ್ಞಾನಿಕ ನಿರ್ಧಾರಗಳಿಂದ ಜನರ ಜೀವಕ್ಕೆ ಅಪಾಯವಾಗುವಂತಹ ಪರಿಸ್ಥಿತಿ ನಿರ್ಮಿಸಿದೆ. ಸಾರ್ವಜನಿಕರ ಜೀವದ ಮೇಲೆ ಚೆಲ್ಲಾಟ ವಾಡುತ್ತಿರುವ ಜಿಲ್ಲಾಡಳಿತದ ಈ ತೀರ್ಮಾನ ಖಂಡನೀಯ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News