ಎಚ್-1ಬಿ ಸೇರಿದಂತೆ ಎಲ್ಲ ಉದ್ಯೋಗ ವೀಸಾಗಳನ್ನು ಸ್ಥಗಿತಗೊಳಿಸಿ

Update: 2020-05-08 18:10 GMT
ಟ್ರಂಪ್

ವಾಶಿಂಗ್ಟನ್, ಮೇ 8: ಎಲ್ಲ ಅತಿಥಿ ಕೆಲಸಗಾರ ವೀಸಾಗಳನ್ನು 60 ದಿನಗಳವರೆಗೆ ಹಾಗೂ ಎಚ್-1ಬಿ ವೀಸಾ ಸೇರಿದಂತೆ ಅದರ ಕೆಲವು ಮಾದರಿಗಳನ್ನು ಕನಿಷ್ಠ ಮುಂದಿನ ವರ್ಷದವರೆಗೆ ಅಥವಾ ದೇಶದ ನಿರುದ್ಯೋಗ ಪ್ರಮಾಣವು ಸಾಮಾನ್ಯ ಸ್ಥಿತಿಗೆ ಬರುವವರೆಗೆ ಸ್ಥಗಿತಗೊಳಿಸುವಂತೆ ರಿಪಬ್ಲಿಕನ್ ಪಕ್ಷದ ನಾಲ್ವರು ಪ್ರಮುಖ ಸೆನೆಟರ್‌ಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಒತ್ತಾಯಿಸಿದ್ದಾರೆ.

ಆರ್ಥಿಕ ಚೇತರಿಕೆಯ ಆರಂಭಿಕ ಹಂತಗಳಲ್ಲಿ ನಿರುದ್ಯೋಗಿ ಅಮೆರಿಕನ್ನರನ್ನು ರಕ್ಷಿಸುವುದಕ್ಕಾಗಿ ಈ ಕ್ರಮ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣವು ಸಾರ್ವಕಾಲಿಕ ಹೆಚ್ಚಳವನ್ನು ಕಂಡಿದೆ. ಟ್ರಂಪ್‌ಗೆ ಬರೆದಿರುವ ಪತ್ರಕ್ಕೆ ಸೆನೆಟರ್‌ಗಳಾದ ಟೆಡ್ ಕ್ರೂಝ್, ಟಾಮ್ ಕಾಟನ್, ಚಕ್ ಗ್ರಾಸ್ಲಿ ಮತ್ತು ಜೋಶ್ ಹಾಲಿ ಸಹಿ ಹಾಕಿದ್ದಾರೆ.

ನಿಮಗೆ ಗೊತ್ತಿರುವಂತೆ, ಮಾರ್ಚ್ ಮಧ್ಯ ಭಾಗದ ನಂತರವೇ 3.3 ಕೋಟಿಗೂ ಅಧಿಕ ಅಮೆರಿಕನ್ನರು ನಿರುದ್ಯೋಗ ಭತ್ತೆಗೆ ಅರ್ಜಿ ಸಲ್ಲಿಸಿದ್ದಾರೆ. ಅಮೆರಿಕದ ನೌಕರ ವೃಂದದ ಪೈಕಿ ಸುಮಾರು ಐದನೇ ಒಂದು ಭಾಗ ಈಗ ಕೆಲಸದಿಂದ ವಂಚಿತರಾಗಿದ್ದಾರೆ. ಇದು ಈ ವರ್ಷದ ಫೆಬ್ರವರಿಯಲ್ಲಿದ್ದ ಐತಿಹಾಸಿಕ ಅತಿ ಕಡಿಮೆ ನಿರುದ್ಯೋಗ ದರವಾದ 3.5 ಶೇಕಡಕ್ಕೆ ಹೋಲಿಸಿದರೆ ಅಗಾಧ ಹೆಚ್ಚಳವಾಗಿದೆ ಎಂದು ಗುರುವಾರ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಸೆನೆಟರ್‌ಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News