ಕೊರೋನ ಸೋಂಕು: ಸಮುದಾಯ ಹರಡುವಿಕೆ ಅಧ್ಯಯನಕ್ಕೆ ಮುಂದಾದ ಐಸಿಎಂಆರ್

Update: 2020-05-09 03:57 GMT

ಹೊಸದಿಲ್ಲಿ, ಮೇ 9: ಗರಿಷ್ಠ ಕೊರೋನ ವೈರಸ್ ಸೋಂಕುಪೀಡಿತ 75 ಜಿಲ್ಲೆಗಳಲ್ಲಿ, ಈ ಮಾರಕ ವೈರಸ್‌ನ ಸಮುದಾಯ ಹರಡುವಿಕೆ ಆರಂಭವಾಗಿದೆಯೇ ಎಂಬ ಬಗ್ಗೆ ಅಧ್ಯಯನ ಕೈಗೊಳ್ಳಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಿರ್ಧರಿಸಿದೆ.

ಈ ಸೋಂಕು ರೋಗದ ಹರಡುವಿಕೆಯ ಮೇಲೆ ನಿಗಾ ಇಡುವ ಸಲುವಾಗಿ ಸಕ್ರಿಯ ಕಣ್ಗಾವಲು ವ್ಯವಸ್ಥೆಯಡಿ ಈ ಜಿಲ್ಲೆಗಳಲ್ಲಿ ಕನಿಷ್ಠ 250 ಮಾದರಿಗಳನ್ನು ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಇಲ್‌ನೆಸ್ (ಎಸ್‌ಎಆರ್‌ಐ) ಮತ್ತು ಇನ್‌ಫ್ಲುಯೆಂಝಾ ಮಾದರಿಯ ಅಸ್ವಸ್ಥತೆ (ಐಎಲ್‌ಐ) ಪರೀಕ್ಷೆಗೆ ಗುರಿಪಡಿಸುವಂತೆ ಸಂಬಂಧಪಟ್ಟ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಆರಂಭದಲ್ಲಿ ರ್ಯಾಪಿಡ್ ಆ್ಯಂಟಿಬಾಡಿ ಪರೀಕ್ಷಾ ಕಿಟ್‌ಗಳ ಮೂಲಕ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಇದರ ಫಲಿತಾಂಶದಲ್ಲಿ ವ್ಯತ್ಯಯ ಕಂಡುಬಂದ ಹಿನ್ನೆಲೆಯಲ್ಲಿ ಇದನ್ನು ಮುಂದೂಡಲು ನಿರ್ಧರಿಸಿತ್ತು. ಇದೀಗ ಎಲಿಸಾ (ಎಂಜೈಮ್ ಲಿಂಕ್ಡ್ ಇಮ್ಯುನೊಸೋರ್ಬೆಂಟ್ ಅಸ್ಸೆ) ಪರೀಕ್ಷಾ ಕಿಟ್‌ಗಳನ್ನು ಬಳಸಿ ಅಧ್ಯಯನ ನಡೆಸಲು ನಿರ್ಧರಿಸಿದೆ.

ಎಲಿಸಾ ಪರೀಕ್ಷಾ ಕಿಟ್‌ಗಳು ರ್ಯಾಪಿಡ್ ಆ್ಯಂಟಿಬಾಡಿ ಪರೀಕ್ಷಾ ಕಿಟ್‌ನಂತೆ ರಕ್ತದಲ್ಲಿರುವ ಆ್ಯಂಟಿಬಾಡಿ ಅಂಶವನ್ನು ಪತ್ತೆ ಮಾಡುತ್ತದೆ. ಆದರೆ ಈ ಕಿಟ್‌ಗಳಿಗೆ ಐಸಿಎಂಆರ್ ಇನ್ನೂ ಮಾನ್ಯತೆ ನೀಡಿಲ್ಲ. ಐಸಿಎಂಆರ್ ಕಳೆದ ಮಾರ್ಚ್‌ನಲ್ಲಿ ರೋಗ ಸಾಮುದಾಯಿಕವಾಗಿ ಹರಡುತ್ತಿದೆಯೇ ಎಂದು ಪತ್ತೆ ಮಾಡಲು ಈ ಪರೀಕ್ಷೆ ನಡೆಸಿತ್ತು. ಆದರೆ ಸಾಮುದಾಯಿಕ ಹರಡುವಿಕೆ ಆರಂಭವಾಗಿದೆ ಎಂಬ ಬಗ್ಗೆ ನಿರ್ಧಾರಕ್ಕೆ ಬರಲು ಸಾಕಷ್ಟು ಪುರಾವೆಗಳಿಲ್ಲ ಎಂದು ಅಭಿಪ್ರಾಯಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News