ದುಬೈನಿಂದ ಮಂಗಳೂರಿಗೆ ವಿಮಾನ: ಹಳೆ ವೀಡಿಯೊ ವೈರಲ್ ಮಾಡಿ ಸುಳ್ಳು ಸುದ್ದಿ ಹರಡುತ್ತಿರುವ ಕಿಡಿಗೇಡಿಗಳು
ಮಂಗಳೂರು, ಮೇ 8: ದೇಶದಲ್ಲಿ ಲಾಕ್‌ಡೌನ್ ಆರಂಭವಾಗುವುದಕ್ಕಿಂತ ಮೊದಲು ದುಬೈಯಿಂದ ಮಂಗಳೂರಿಗೆ ಆಗಮಿಸಿದ ವಿಮಾನ ಪ್ರಯಾಣಿಕರ ಕುರಿತ ವಾರ್ತಾಭಾರತಿಯ ವೀಡಿಯೊ ವರದಿಯೊಂದನ್ನು ದುಬೈಯಲ್ಲಿ ಕೊರೋನ ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರು ವಾಪಸ್ ಆಗಮಿಸಿದ್ದಾರೆ ಎಂಬಂತೆ ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವುದು ಕಂಡುಬಂದಿದೆ.
ದೇಶದಲ್ಲಿ ಲಾಕ್‌ಡೌನ್ ಆರಂಭವಾಗುವ ಮೊದಲು ಅಂದರೆ ಮಾರ್ಚ್ 18ರಂದು ದುಬೈಯಿಂದ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಿಮಾನದಲ್ಲಿ ಹಲವಾರು ಪ್ರಯಾಣಿಕರು ತಾಯ್ನಾಡಿಗೆ ತಲುಪಿದ್ದರು. ಈ ಕುರಿತ ವೀಡಿಯೊವೊಂದು ವಾರ್ತಾಭಾರತಿ ಯೂಟ್ಯೂಬ್ ಚಾನೆಲ್‌ನಲ್ಲಿ ಕಳೆದ ಮಾರ್ಚ್ 18ರಂದು ಪ್ರಕಟಗೊಂಡಿತ್ತು.
ಇದನ್ನು ಕಿಡಿಗೇಡಿಗಳು ಇದೀಗ ಡೌನ್‌ಲೋಡ್ ಮಾಡಿ ಸದ್ಯ ಅರಬ್ ರಾಷ್ಟ್ರದಲ್ಲಿ ಕೊರೋನ ಸಂಕಷ್ಟಕ್ಕೆ ಸಿಲುಕಿರುವ ಕರಾವಳಿ ಕನ್ನಡಿಗರನ್ನು ತಾಯ್ನಾಡಿಗೆ ಕರೆತರಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವುದು ಕಂಡುಬಂದಿದೆ. ಆದರೆ ವಾರ್ತಾಭಾರತಿ ಹೆಸರಿನಲ್ಲಿ ಹರಿದಾಡುತ್ತಿರುವ ಈ ವೀಡಿಯೊ ಮಾ.18ರಂದು ದುಬೈಯಿಂದ ಮಂಗಳೂರಿಗೆ ಆಗಮಿಸಿದ ವಿಮಾನ ಯಾನಿಗಳಿಗೆ ಸಂಬಂಧಿಸಿದ್ದಾಗಿದೆ. ಲಾಕ್ ಡೌನ್ ಬಳಿಕ ಅರಬ್ ರಾಷ್ಟ್ರ ಸೇರಿದಂತೆ ವಿದೇಶಗಳಲ್ಲಿ ಸಿಲುಕಿರುವವರನ್ನು ಕರೆದುಕೊಂಡು ಮಂಗಳೂರಿಗೆ ಈವರೆಗೆ ಯಾವುದೇ ವಿಮಾನ ಬಂದಿಲ್ಲ. ಆದ್ದರಿಂದ ವಾರ್ತಾಭಾರತಿಯ ಹಳೆಯ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಸುಳ್ಳು ಸುದ್ದಿ ಹರಡಿ ಜನರನ್ನು ವಂಚಿಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕೆಯ ಸಂಪಾದಕರು ತಿಳಿಸಿದ್ದಾರೆ.