×
Ad

ಬಂಟ್ವಾಳದ ಒಂದೇ ಮನೆಯ ಮೂವರಿಗೆ ಕೊರೋನ ಪಾಸಿಟಿವ್

Update: 2020-05-09 13:22 IST

ಬಂಟ್ವಾಳ, ಮೇ 9: ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಪೇಟೆಯಲ್ಲಿ ಶನಿವಾರ ಮತ್ತೆ ಮೂವರಿಗೆ ಕೋವಿಡ್-19 (ಕೊರೋನ) ಸೋಂಕು ಪಾಸಿಟಿವ್ ಆಗಿದ್ದು, ಈ ಮೂವರೂ ಒಂದೇ ಮನೆಯವರಾಗಿದ್ದಾರೆ.

ಇಂದು ಸೋಂಕು ಪಾಸಿಟಿವ್ ಆದ ಮನೆಯ 67 ವರ್ಷ ವಯಸ್ಸಿನ ವೃದ್ಧರೊಬ್ಬರಿಗೆ ಮೇ 1ರಂದು ಸೋಂಕು ದೃಢಪಟ್ಟಿತ್ತು. ಅವರ ಸಂಪರ್ಕದಿಂದ ಅವರ ಪುತ್ರ(30) ಅಕ್ಕ(70), ತಂಗಿ(60)ಗೆ ಇಂದು ಸೋಂಕು ಪಾಸಿಟ್‍ವ್ ಆಗಿದೆ. ಮೇ 1ರಂದು ಪಾಸಿಟ್‍ವ್ ಆದ ವೃದ್ಧನಿಗೆ ಬಂಟ್ವಾಳದಲ್ಲಿ ಎಪ್ರಿಲ್ 19ರಂದು ಮೃತಪಟ್ಟ 45 ವರ್ಷ ವಯಸ್ಸಿನ ಮಹಿಳೆಯ ಸಂಪರ್ಕದಿಂದ ಸೋಂಕು ತಗುಲಿತ್ತು.

ಮೇ 1ರಂದು ವೃದ್ಧನಿಗೆ ಸೋಂಕು ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಆ ಮನೆಯ 8 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇವರಲ್ಲಿ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು ಮೂರು ಪ್ರಕರಣಗಳು ಪಾಸಿಟಿವ್ ಆಗುವುದರೊಂದಿಗೆ ಬಂಟ್ವಾಳ ಪೇಟೆಯಲ್ಲೇ 9 ಪ್ರಕರಣಗಳು ಪಾಸಿಟಿವ್ ಆಗಿದೆ. ಈ 9 ಮಂದಿ ಮೂರು ಮನೆಯವರಾಗಿದ್ದು, ಮೂರು ಮನೆಗಳೂ ನೆರೆಮನೆಗಳಾಗಿವೆ.

ಬಂಟ್ವಾಳ ತಾಲೂಕಿನಲ್ಲಿ ಒಟ್ಟು 12 ಪ್ರಕರಣಗಳು ಪಾಸಿಟಿವ್ ಆಗಿದೆ. ತಾಲೂಕಿನ ಸಜಿಪ ನಡು ಮತ್ತು ತುಂಬೆ ಗ್ರಾಮದ ಪಾಸಿಟಿವ್ ಆದ ಮಗು ಮತ್ತು ಯುವಕ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನರಿಕೊಂಬು ಗ್ರಾಮದ ಮಹಿಳೆ, ಬಂಟ್ವಾಳ ಪೇಟೆಯ ಇಬ್ಬರು ಪುರುಷರು, ಮೂವರು ಮಹಿಳೆಯರು, ಒಬ್ಬ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳದಲ್ಲಿ ಸೋಂಕು ಪಾಸಿಟಿವ್ ಆದ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.

ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15ಕ್ಕೆ ಏರಿದೆ. ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಒಟ್ಟು ಪಾಸಿಟಿವ್ ಪ್ರಕರಣಗಳು 31. ಆದರೆ ಈ ಪೈಕಿ 25 ಮಂದಿ ಮಾತ್ರ ದ.ಕ. ಜಿಲ್ಲೆಯ ನಿವಾಸಿಗಳು. ಉಳಿದ ಆರು ಮಂದಿಯಲ್ಲಿ ಕೇರಳದ ನಾಲ್ವರು, ಉಡುಪಿ, ಭಟ್ಕಳದ ತಲಾ ಒಬ್ಬರು ಸೇರಿದ್ದಾರೆ. ಮೃತಪಟ್ಟವರ ಸಂಖ್ಯೆ 3. ಆಸ್ಪತ್ರೆಯಿಂದ ಬಿಡುಗಡೆಗೊಂಡವರ ಸಂಖ್ಯೆ 13.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News