‘ಲಾಕ್ ಡೌನ್ ಉಲ್ಲಂಘನೆಗೆ ಮರ್ಕಝ್ ಮುಖ್ಯಸ್ಥರೇ ಕರೆ ನೀಡಿದ್ದರು’ ಎನ್ನಲಾದ ಆಡಿಯೋ ತಿರುಚಿರುವ ಸಾಧ್ಯತೆ

Update: 2020-05-09 17:59 GMT

ಹೊಸದಿಲ್ಲಿ: ಮರ್ಕಝ್ ನಿಝಾಮುದ್ದೀನ್ ಮುಖ್ಯಸ್ಥ ಮೌಲಾನ ಸಾದ್ ಅವರು ತಬ್ಲೀಗಿ ಜಮಾತ್ ಸದಸ್ಯರಿಗೆ ‘ಸುರಕ್ಷಿತ ಅಂತರ ನಿಯಮಗಳು ಹಾಗೂ ನಿಷೇಧಾಜ್ಞೆಗಳನ್ನು ಪಾಲಿಸದಂತೆ’ ಕರೆ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದ ಆಡಿಯೋ ಕ್ಲಿಪ್  ತಿರುಚಲ್ಪಟ್ಟಿರುವ ಸಾಧ್ಯತೆಯಿದೆ ಎಂದು ದಿಲ್ಲಿ ಪೊಲೀಸರ ಕ್ರೈಂ ಬ್ರ್ಯಾಂಚ್ ನಡೆಸಿದ ಆರಂಭಿಕ ತನಿಖೆಯಿಂದ ತಿಳಿದು ಬಂದಿದೆ ಎಂದು indianexpress.com ವರದಿ ಮಾಡಿದೆ.

ಹಲವಾರು ಆಡಿಯೋ ಕ್ಲಿಪ್‍ ಗಳನ್ನು ಬಳಸಿ ಈ ಆಡಿಯೋ ಕ್ಲಿಪ್ ತಯಾರಿಸಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಮರ್ಕಝ್ ಮುಖ್ಯಸ್ಥರ ವಿರುದ್ಧ ಪೊಲೀಸು ದಾಖಲಿಸಿದ್ದ ಎಫ್‍ಐಆರ್‍ನಲ್ಲಿ ಈ ನಿರ್ದಿಷ್ಟ ಆಡಿಯೋ ಕ್ಲಿಪ್ ಕೂಡ ಉಲ್ಲೇಖಗೊಂಡಿತ್ತು. ಪೊಲೀಸರು ಇದೀಗ ಎಲ್ಲಾ ಆಡಿಯೋ ಕ್ಲಿಪ್‍ಗಳು ಹಾಗೂ ತಿರುಚಲ್ಪಟ್ಟಿದೆಯೆಂದು ಹೇಳಲಾದ ಆಡಿಯೋ ಕ್ಲಿಪ್ಪಿಂಗ್ ಅನ್ನೂ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಮಾರ್ಚ್ ತಿಂಗಳಲ್ಲಿ ಪಶ್ಚಿಮ ನಿಝಾಮುದ್ದೀನ್ ಪ್ರದೇಶದ ಮಸೀದಿಯಲ್ಲಿ ಸುಮಾರು 2,000 ಜನರ ಭಾಗವಹಿಸುವಿಕೆಯೊಂದಿಗೆ  ನಡೆಸಿದ ಮರ್ಕಝ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಾದ್  ಹಾಗೂ ತಬ್ಲೀಗಿ ಜಮಾತ್ ಸಂಘಟನೆಯ ಮುಖ್ಯ ಕಾರ್ಯಾಲಯವಾಗಿರುವ ಆಲಾಮಿ ಮರ್ಕಝ್ ಬಂಗ್ಲೇವಾಲಿ ಮಸ್ಜಿದ್ ಇದರ ಆಡಳಿತ ಸಮಿತಿಗೆ ಸೇರಿದ ಆರು ಮಂದಿಯ ವಿರುದ್ಧ ದಿಲ್ಲಿ ಪೊಲೀಸರು  ಸೆಕ್ಷನ್ 304 ಅನ್ವಯ ಪ್ರಕರಣ ದಾಖಲಿಸಿದ್ದರು.

ಮೌಲಾನ ಮುಹಮ್ಮದ್ ಸಾದ್ ಅವರದ್ದೆಂದು ಹೇಳಲಾದ ಆಡಿಯೋ ಕ್ಲಿಪ್ ವಾಟ್ಸ್ಯಾಪ್ ನಲ್ಲಿ ಮಾರ್ಚ್ 21ರಂದು ಹರಿದಾಡಿರುವ ಕುರಿತಂತೆ ಹಾಗೂ ಅದರಲ್ಲಿ ಮೌಲಾನ ಸಾದ್ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಲು ಕರೆ ನೀಡಿದ್ದರೆಂದು ಹಝ್ರತ್ ನಿಝಾಮುದ್ದೀನ್ ಠಾಣಾಧಿಕಾರಿ ಮುಕೇಶ್ ವಾಲಿಯಾ ನೀಡಿದ ದೂರಿನ ಆಧಾರದಲ್ಲಿ ಎಫ್‍ಐಆರ್ ದಾಖಲಾಗಿತ್ತು.

ಮರ್ಕಝ್ ಸದಸ್ಯರೊಬ್ಬರ ಲ್ಯಾಪ್ ಟಾಪ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು ಸುಮಾರು 350ಕ್ಕೂ ಅಧಿಕ ಆಡಿಯೋ ಕ್ಲಿಪ್  ಮೂರು ನಮೂನೆಗಳಲ್ಲಿ- ಮರ್ಕಝ್ ಕಾರ್ಯಕ್ರಮಗಳ ಕ್ಲಿಪ್, ಅನುಯಾಯಿಗಳಿಗೆ ಕಳುಹಿಸಲಾದ ಆಡಿಯೋ ಕ್ಲಿಪ್ ಹಾಗೂ ಯುಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಲಾದ ಆಡಿಯೋ ಕ್ಲಿಪ್ ಅದರಲ್ಲಿದ್ದವು ಎಂದು ಮೂಲಗಳು ತಿಳಿಸಿವೆ. ಆದರೆ ಈ ಲ್ಯಾಪ್ ಟಾಪ್ ನಲ್ಲಿ ವೈರಲ್ ಆದ ಆಡಿಯೋ ಕ್ಲಿಪ್ ಇರಲಿಲ್ಲವೆಂದು ಹೇಳಲಾಗಿದೆ.

ಮೌಲಾನ ಸಾದ್ ವಿವಿಧ ಕಾರ್ಯಕ್ರಮಗಳಲ್ಲಿ ಪೊಲೀಸರು ಹಾಗೂ ಧರ್ಮದ ಕುರಿತು ನೀಡಿರುವ ಹೇಳಿಕೆಗಳನ್ನು ತೆಗೆದು ತಿರುಚಿದ ಆಡಿಯೋ ತಯಾರಿಸಿ ವೈರಲ್ ಮಾಡಲಾಗಿತ್ತೆಂದು ತನಿಖಾಕಾರರು ಕಂಡುಕೊಂಡಿದ್ದಾರೆನ್ನಲಾಗಿದೆ.

ವರದಿ ನಿಜವಲ್ಲ: ದಿಲ್ಲಿ ಪೊಲೀಸರು

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ದಿಲ್ಲಿ ಪೊಲೀಸರು ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ. indianexpress.com ನಲ್ಲಿ ಪ್ರಕಟವಾದ ವರದಿ ತಪ್ಪು ಮಾತ್ರವಲ್ಲ, ಸಂಪೂರ್ಣವಾಗಿ ಪರಿಶೀಲಿಸದ ಮೂಲಗಳು ಮತ್ತು ಕಲ್ಪನೆಗಳಿಂದ ಕೂಡಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News