ಗುಜರಾತ್: ಎಫ್ ಐಆರ್ ದಾಖಲು ಹೆಚ್ಚಾದಂತೆ ಇಳಿಕೆಯಾಯಿತು ದ್ವೇಷ ಭಾಷಣ ಪ್ರಕರಣ

Update: 2020-05-09 08:43 GMT

ಅಹ್ಮದಾಬಾದ್ : ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದ ಮೂಲಕ ದ್ವೇಷದ ಹರಡುವವರ ವಿರುದ್ಧ ಕಾನೂನು  ಸಮರ ಕೈಗೊಳ್ಳುವ ನಿಟ್ಟಿನಲ್ಲಿ ಕೆಲ ಸಾಮಾಜಿಕ ಹೋರಾಟಗಾರರು ಹಾಗೂ ನಾಗರಿಕರು ಕೈಗೆತ್ತಿಕೊಂಡ ಅಭಿಯಾನ ಗುಜರಾತ್ ರಾಜ್ಯದಲ್ಲಿ ಫಲ ನೀಡಲಾರಂಭಿಸಿದೆ. ಕಳೆದೊಂದು ತಿಂಗಳಿನಿಂದ ಈ ಹೋರಾಟಗಾರರು  ದ್ವೇಷ ಸಂದೇಶಗಳ ವಿರುದ್ಧ ಪೊಲೀಸ್ ದೂರು ದಾಖಲಿಸಲಾರಂಭಿಸಿದ್ದಾರೆ.

“ಬುಧವಾರ ಸಂಜೆಯ ತನಕ ಒಟ್ಟು 686  ಎಫ್‍ಐಆರ್‍ಗಳನ್ನು ದ್ವೇಷದ ಸಂದೇಶ ಸಾರುವವರ  ಹಾಗೂ ವದಂತಿಗಳನ್ನು ಹರಡುವವರ ವಿರುದ್ಧ ದಾಖಲಿಸಲಾಗಿದೆ. ಒಟ್ಟು 1385 ಮಂದಿಯನ್ನು ಬಂಧಿಸಲಾಗಿದ್ದು ಅವರೆಲ್ಲರೂ ನಂತರ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ'' ಎಂದು ಹೇಳುತ್ತಾರೆ ವಕೀಲ ಹಾಗೂ ಅಲ್ಪಸಂಖ್ಯಾಕ್ ಅಧಿಕಾರ್ ಮಂಚ್‍ನ ಶಂಶದ್ ಪಠಾಣ್.

ಈ ಅಭಿಯಾನದ ಹಿಂದೆ ಪ್ರಮುಖ ಪಾತ್ರ ವಹಿಸಿರುವ ಅವರ ಪ್ರಕಾರ ತಂತ್ರಗಾರಿಕೆ ಫಲ ನೀಡಿದೆ. “ಹಲವಾರು ದೂರುಗಳು ದಾಖಲಾಗುತ್ತಿದ್ದಂತೆಯೇ ದ್ವೇಷದ ಸಂದೇಶಗಳನ್ನು ಪೋಸ್ಟ್ ಮಾಡುವ ಹಾಗೂ  ಶೇರ್ ಮಾಡುವ ಪ್ರಕರಣಗಳು ಶೇ 85ರಷ್ಟು ಕಡಿಮೆಯಾಗಿದೆ'' ಎಂದು ಅವರು ಹೇಳುತ್ತಾರೆ.

“ಮುಂದಿನ ಕ್ರಮದ ಭಾಗವಾಗಿ ನಾವು ಲಾಕ್ ಡೌನ್ ಮುಗಿದ ನಂತರ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಇಲ್ಲಿಯ ತನಕ ದೂರುಗಳ ಆಧಾರದಲ್ಲಿ ಎಫ್‍ಐಆರ್ ದಾಖಲಾಗದೇ ಇರುವ ಪ್ರಕರಣಗಳತ್ತ ಅವರ ಗಮನ ಸೆಳೆಯಲಿದ್ದೇವೆ. ಈ ನಿಟ್ಟಿನಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ. ಎಫ್‍ಐಆರ್ ದಾಖಲಾಗದೇ ಇದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವ ಇರಾದೆಯಿದೆ'' ಎಂದು ಅವರು ವಿವರಿಸುತ್ತಾರೆ.

ದ್ವೇಷ ಸಂದೇಶಗಳ ಕುರಿತಂತೆ ಜನರಿಗೆ ದೂರು ನೀಡುವಂತೆ ಪ್ರೋತ್ಸಾಹಿಸುವ ಕಾರ್ಯವನ್ನು ದಲಿತ ಹೋರಾಟಗಾರ ಕೌಶಿಕ್ ಪರ್ಮಾರ್ ಕೂಡ ಮಾಡುತ್ತಿದ್ದಾರೆ. ಸ್ಥಳೀಯ ದೈನಿಕಗಳಲ್ಲಿ ದ್ವೇಷ ಪಸರಿಸುವ ಕೆಲಸ ಮಾಡಿದ್ದಾರೆನ್ನಲಾದ ಕೆಲ ಮಾಧ್ಯಮ ಮಂದಿಯ ವಿರುದ್ಧವೂ ದೂರು ದಾಖಲಾಗಿರುವುದು  ಗಮನಾರ್ಹ.

ದ್ವೇಷ ಸಂದೇಶ ಹರಡುವವರ ವಿರುದ್ಧ ಪೊಲೀಸ್ ದೂರು ದಾಖಲಿಸುವ ಅಥವಾ ಕಾನೂನಿನ ಮೊರೆ ಹೋಗುವ ಈ ವಿಧಾನವನ್ನು ಗುಜರಾತ್‍ನ ಇತರೆಡೆಗಳಲ್ಲೂ ಅನುಸರಿಸಲಾಗುತ್ತಿದ್ದು ಮಹಾರಾಷ್ಟ್ರದ ಹಲವೆಡೆ ಕೂಡ ಇಂತಹುದೇ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News