ಹೆಬ್ರಿ: ಚೆಕ್‌ಪೋಸ್ಟ್‌ನಲ್ಲಿ ನಿಯಮ ಉಲ್ಲಂಘಿಸಿದ ಆರೋಪ; ಬಿಜೆಪಿ ರಾಜ್ಯ ಕಾರ್ಯದರ್ಶಿ ವಿರುದ್ಧ ಪ್ರಕರಣ ದಾಖಲು
ಹೆಬ್ರಿ, ಮೇ 9: ಉಡುಪಿ ಜಿಲ್ಲೆಯ ಗಡಿಭಾಗ ಹೆಬ್ರಿಯ ಸೋಮೇಶ್ವರದಲ್ಲಿ ಹಾಕಲಾದ ಅಂತರ್‌ಜಿಲ್ಲಾ ಚೆಕ್‌ಪೋಸ್ಟ್‌ನಲ್ಲಿ ಜಿಲ್ಲಾಡಳಿತದ ಪಾಸ್ ಪಡೆಯದೆ ಒಳಬರಲು ಯತ್ನಿಸುವ ಮೂಲಕ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಯಾನೆ ಡಾ.ಬಿ.ಆರ್.ಶೆಟ್ಟಿ ಎಂಬವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ನಿವಾಸಿ, ಮೂಲತಃ ಕುಂದಾಪುರ ತಾಲೂಕಿನ ಬೇಳೂರಿನ ಡಾ.ಬಿ.ಆರ್.ಶೆಟ್ಟಿ ಮೇ 7ರಂದು ರಾತ್ರಿ 11 ಗಂಟೆಗೆ ಕಾರಿನಲ್ಲಿ ಚಾಲಕ ಉದಯ ಎಂಬವರೊಂದಿಗೆ ಶಿವಮೊಗ್ಗದಿಂದ ಆಗುಂಬೆ ಮಾರ್ಗವಾಗಿ ಕುಂದಾಪುರಕ್ಕೆ ತೆರಳುತ್ತಿದ್ದರು.ಈ ಮಧ್ಯೆ ಸೋಮೇಶ್ವರ ಚೆಕ್ ಪೋಸ್ಟ್‌ನಲ್ಲಿ ಜಿಲ್ಲಾಡಳಿತದ ಪಾಸ್ ಇಲ್ಲದ ಕಾರಣ ಅಧಿಕಾರಿಗಳು ಜಿಲ್ಲೆಗೆ ಪ್ರವೇಶ ಮಾಡದಂತೆ ಕಾರನ್ನು ತಡೆಹಿಡಿದರೆನ್ನಲಾಗಿದೆ.
ಈ ವೇಳೆ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದ ಡಾ.ಬಿ.ಆರ್.ಶೆಟ್ಟಿ, ‘ನಾನು ಯಾರೆಂದು ನಿಮಗೆ ಗೊತ್ತಿಲ್ಲ, ಗೊತ್ತಾದರೆ ನೀವೇ ನನ್ನನ್ನು ಕಳುಹಿಸಿಕೊಡುತ್ತೀರಿ’ ಎಂದು ಬೆದರಿಸಿದರೆನ್ನಲಾಗಿದೆ. ಅಲ್ಲದೆ ಅವರು ಸ್ಥಳದಿಂದಲೇ ಡಿಸಿ ಹಾಗೂ ಎಸ್ಪಿಗೂ ಕರೆ ಮಾಡಿದ್ದರೆಂದು ತಿಳಿದುಬಂದಿದೆ. ಆದರೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಬಿ.ಆರ್.ಶೆಟ್ಟಿ ಸ್ಥಳದಲ್ಲಿಯೇ ಠಿಕಾಣಿ ಹೂಡಿ ಪ್ರತಿಭಟನೆ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ಪಾಸ್ ಇಲ್ಲದೆ ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಖಡಕ್ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ಬಿ.ಆರ್.ಶೆಟ್ಟಿ ಚೆಕ್‌ಪೋಸ್ಟ್ ಬಳಿಯೇ ಮೇ 8ರ ಸಂಜೆ ನಾಲ್ಕು ಗಂಟೆಯವರೆಗೆ ನಿಂತರು. ಬಳಿಕ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ವ್ಯಕ್ತಿಯ ಮನವೊಲಿಸಿದರು. ಅಲ್ಲದೆ ಮೇಲಾಧಿಕಾರಿಗಳ ಸೂಚನೆಯಂತೆ ಜಿಲ್ಲೆಗೆ ಪ್ರವೇಶಕ್ಕೆ ಅವಕಾಶ ನೀಡಿದರು.
ಆದರೆ ಬಿ.ಆರ್.ಶೆಟ್ಟಿ ಅಲ್ಲಿಂದ ತೆರಳದೆ ಸ್ಥಳದಲ್ಲಿಯೇ ಉಳಿದುಕೊಂಡರು. ಡಿಸಿ ಮತ್ತು ಎಸ್ಪಿ ಸ್ಥಳಕ್ಕೆ ಬಾರದೆ ನಾನು ತೆರಳುವುದಿಲ್ಲ ಎಂದು ಪಟ್ಟುಹಿಡಿದರು. ಸ್ಥಳದಲ್ಲಿ ಸಾಕಷ್ಟು ಮಂದಿ ಸ್ಥಳೀಯರು ಕೂಡ ಜಮಾಯಿಸಿದ್ದರು. ಬಿ.ಆರ್. ಶೆಟ್ಟಿ ತೆರಳದ ಹಿನ್ನೆಲೆಯಲ್ಲಿ ಸ್ಥಳೀಯರು ಅವರಿಗೆ ೇರಾವ್ ಹಾಕಿದರು. ಸಂಜೆ ಸುಮಾರು ಆರು ಗಂಟೆಗೆ ಬಿ.ಆರ್.ಶೆಟ್ಟಿ ತನ್ನ ಕಾರಿನಲ್ಲಿ ಅಲ್ಲಿಂದ ಬೇಳೂರಿಗೆ ಹೊರಟರು ಎಂದು ತಿಳಿದುಬಂದಿದೆ. ಇವರು ಮೇ 7ರಂದು ಬೆಳಗ್ಗೆ ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರ ಕಾರಿನ ಹಿಂದೆ ಪಾಸ್ ಇಲ್ಲದೆ ಶಿವಮೊಗ್ಗಕ್ಕೆ ತೆರಳಿದ್ದರೆಂದು ಮೂಲಗಳು ತಿಳಿಸಿವೆ.
ಐಪಿಸಿ 269, 34ರಂತೆ ಮೊಕದ್ದಮೆ
ಬೇಳೂರು ರಾಘವೇಂದ್ರ ಜಿಲ್ಲಾಡಳಿತದ ಪಾಸ್ ಪಡೆಯದೆ ನಿಯಮವನ್ನು ಉಲ್ಲಂಘನೆ ಮಾಡಿ ಸೋಮೇಶ್ವರ ಚೆಕ್‌ಪೋಸ್ಟ್ ಬಳಿ ಮೇ 8ರ ಸಂಜೆ 4 ಗಂಟೆಯವರೆಗೆ ಅನಗತ್ಯವಾಗಿ ತಿರುಗಾಡಿಕೊಂಡು ಮಾಸ್ಕ್ ಧರಿಸದೇ ಕಾಲಹರಣ ಮಾಡುತ್ತಿದ್ದರು. ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಾಧ್ಯತೆ ಇದೆ ಎಂದು ತಿಳಿಸಿದರೂ ಸಹ ನಿರ್ಲಕ್ಷತನವನ್ನು ತೋರಿ ಸರಕಾರದ ಅದೇಶವನ್ನು ಉಲ್ಲಂಘಿಸಿದ್ದಾರೆ ಎಂದು ರಾಘವೇಂದ್ರ ವಿರುದ್ಧ ಹೆಬ್ರಿ ಪೊಲೀಸ್‌ಠಾಣೆಯಲ್ಲಿ ಕಲಂ: 269, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ