ದುಬೈಯ ಅನಿವಾಸಿ ಕನ್ನಡಿಗರ ಹೊತ್ತ ವಿಮಾನ ಮೇ 12ರಂದು ಮಂಗಳೂರಿಗೆ

Update: 2020-05-09 11:37 GMT

ಮಂಗಳೂರು, ಮೇ 9: ಕೊರೋನ-ಲಾಕ್‌ಡೌನ್‌ನಿಂದ ವಿದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಅತಂತ್ರರಾಗಿರುವ ಅನಿವಾಸಿ ಕನ್ನಡಿಗರನ್ನು ತವರು ಜಿಲ್ಲೆಗಳಿಗೆ ಕರೆತರುವ ಪ್ರಯತ್ನಕ್ಕೆ ಯಶಸ್ಸು ಸಿಗತೊಡಗಿದ್ದು, ದುಬೈಯಿಂದ ಪ್ರಥಮ ವಿಮಾನವು ಮೇ 12ರಂದು ಮಂಗಳೂರಿಗೆ ಆಗಮಿಸಲಿದೆ.

ಈ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ‘ದುಬೈನಿಂದ ಮಂಗಳೂರಿಗೆ ಮೇ 14ರ ಬದಲಿಗೆ 12ರಂದೇ ವಿಮಾನ ಆಗಮಿಸಲಿದೆ. ಏರ್ ಇಂಡಿಯಾ ಅನಿವಾಸಿ ಕನ್ನಡಿಗರನ್ನು ಕರೆತರಲು ಒಪ್ಪಿಗೆ ನೀಡಿದೆ. ಹಾಗಾಗಿ 2 ದಿನ ಮುಂಚಿತವಾಗಿಯೇ ಅನಿವಾಸಿ ಕನ್ನಡಿಗರು ತಾಯ್ನಾಡಿಗೆ ಮರಳಲಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ.

ಭಾರತೀಯ ಕಾಲಮಾನ ಸಂಜೆ 4:10ಕ್ಕೆ ದುಬೈಯಿಂದ ಹೊರಡುವ ವಿಮಾನವು ರಾತ್ರಿ 9:10ಕ್ಕೆ ಮಂಗಳೂರು ತಲುಪಲಿದೆ. ಈ ವಿಮಾನದಲ್ಲಿ 177 ಪ್ರಯಾಣಿಕರು ಆಗಮಿಸಲಿದ್ದಾರೆ.

ಮೇ 12ರಂದು ಕೇರಳದ ಕೋಝಿಕೋಡ್ ಮೂಲಕ ಕನ್ನಡಿಗರು ಭಾರತಕ್ಕೆ ಆಗಮಿಸಲು ಅವಕಾಶ ನೀಡುವ ಭರವಸೆ ನೀಡಲಾಗಿತ್ತು. ಆದರೆ ಕೋಝಿಕ್ಕೋಡ್ ಬದಲು ಮಂಗಳೂರಿನಲ್ಲೇ ವಿಮಾನ ಇಳಿಯಬೇಕು ಎಂಬ ಬೇಡಿಕೆಯ ಹಿನ್ನೆಲೆಯಲ್ಲಿ ಮೇ 14ರಂದು ವಿಮಾನಯಾನಕ್ಕೆ ಒಪ್ಪಿಗೆ ಸಿಕ್ಕಿತ್ತು. ಆದರೆ, ಇದೀಗ ಎರಡು ದಿನ ಮುಂಚಿತವಾಗಿಯೇ ವಿಮಾನ ಮಂಗಳೂರು ಸೇರಲಿದೆ.

ಪ್ರಥಮ ಸುತ್ತಿನಲ್ಲೇ ಬಹರೈನ್‌ನಿಂದ ಒಂದು ವಿಮಾನ ಬೆಂಗಳೂರಿಗೆ ಆಗಮಿಸಲಿದೆ. ಎರಡನೇ ಸುತ್ತಿನಲ್ಲಿ ದುಬೈಯಿಂದ ಮಂಗಳೂರು ಹಾಗೂ ಬೆಂಗಳೂರಿಗೆ ತಲಾ ಒಂದು ವಿಮಾನ ಒದಗಿಸುವಂತೆ ಕೇಂದ್ರವನ್ನು ಒತ್ತಾಯಿಸಿದ್ದೆವು ಎಂದು ದುಬೈ ಅನಿವಾಸಿ ಭಾರತೀಯ ಕರ್ನಾಟಕ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News