×
Ad

ಮಂಗಳೂರು: ಲಾಕ್‌ಡೌನ್ ಮಧ್ಯೆ ತತ್ತರಿಸಿರುವ ಗ್ರಾಹಕರಿಗೆ ವಿದ್ಯುತ್ ಬಿಲ್ ಶಾಕ್!

Update: 2020-05-09 17:37 IST

ಮಂಗಳೂರು, ಮೇ 9: ಕೊರೋನ-ಲಾಕ್‌ಡೌನ್ ಮಧ್ಯೆ ತತ್ತರಿಸಿರುವ ಗ್ರಾಹಕರಿಗೆ ಮೆಸ್ಕಾಂ ವಿದ್ಯುತ್ ಬಿಲ್ ಶಾಕ್ ನೀಡಿದೆ. ಮೂರು ತಿಂಗಳ ಬಿಲ್ ಪಾವತಿಯಿಂದ ವಿನಾಯಿತಿ ಸಿಗಲಿದೆ ಎಂದು ಆರಂಭದಲ್ಲಿ ಭಾವಿಸಿದ್ದ ಗ್ರಾಹಕರಿಗೆ ಇದೀಗ ಮೂರ್ನಾಲ್ಕು ಪಟ್ಟು ಅಧಿಕವಾಗಿ ಬರುತ್ತಿರುವ ಬಿಲ್‌ಗಳು ಶಾಕ್ ನೀಡಲು ಆರಂಭಿಸಿವೆ.

ಲಾಕ್‌ಡೌನ್‌ನಿಂದಾಗಿ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಇದೀಗ ಈ ಬಿಲ್ ಬಲವಾಗಿ ಕಾಡಲಾರಂಭಿಸಿದೆ. ಅಷ್ಟೇ ಅಲ್ಲ, ನಿಗದಿತ ಅವಧಿಯೊಳಗೆ ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆಯೋ ಎಂದು ಆತಂಕಿತರಾಗಿದ್ದಾರೆ. ಕೆಲವು ಕಡೆ ಗ್ರಾಹಕರ ಮೊಬೈಲ್‌ಗೆ ಬಿಲ್ ಮೊತ್ತದ ಸಂದೇಶ ಬಂದಿದ್ದರೆ, ಇನ್ನು ಕೆಲವು ಮಂದಿಗೆ ಮಾಪನ ಬಿಲ್ ಬಂದಿದೆ.

ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳ ವಿದ್ಯುತ್ ಬಿಲ್ ಪಾವತಿಯಿಂದ ವಿನಾಯಿತಿ ನೀಡಲಾಗುವುದು ಎಂದು ರಾಜ್ಯ ಸರಕಾರ ಆರಂಭದಲ್ಲಿ ಹೇಳಿಕೊಂಡಿತ್ತು. ಆದರೆ ಕೆಲವು ದಿನಗಳ ಬಳಿಕ ವಿದ್ಯುತ್ ಕಂಪೆನಿಗಳು ಸರಕಾರದಿಂದ ನಮಗೆ ಯಾವ ಸೂಚನೆಯೂ ಬಂದಿಲ್ಲ. ಹಾಗಾಗಿ ಬಿಲ್ ಪಾವತಿಸಬೇಕು ಎಂದು ಪ್ರಕಟನೆ ನೀಡಿತ್ತು.

ಎಪ್ರಿಲ್‌ನಲ್ಲಿ ಬಿಲ್ ರೀಡಿಂಗ್‌ಗೆ ಮೆಸ್ಕಾಂ ಸಿಬ್ಬಂದಿಯು ಯಾವ ಮನೆಗೂ ಹೋಗಿರಲಿಲ್ಲ. ಹಾಗಾಗಿ ಎಪ್ರಿಲ್ ತಿಂಗಳ ಬಿಲ್‌ನ್ನು ಆನ್‌ಲೈನ್ ಮುಖಾಂತರ ಪಾವತಿಸಲು ಮೆಸ್ಕಾಂ ಸೂಚಿಸಲಾಗಿತ್ತು. ಆನ್‌ಲೈನ್‌ನಲ್ಲಿ ಪಾವತಿಸಲು ಸಾಧ್ಯವಾಗದ ಗ್ರಾಹಕರು ಬಿಲ್ ಮೊತ್ತವನ್ನು ಬಾಕಿ ಇರಿಸಿಕೊಂಡಿದ್ದರು. ಇದೀಗ ಮೇಯಲ್ಲಿ ಮಾಪಕ ಓದಿ ಮಾಪಕದಲ್ಲಿನ ರೀಡಿಂಗ್ ಆಧರಿಸಿ ಎಪ್ರಿಲ್ ಮತ್ತು ಮೇ ತಿಂಗಳ ಬಿಲ್ ಅನ್ನು ಒಟ್ಟಿಗೆ ನೀಡಲಾಗಿದೆ. ಆದರೆ ಹೀಗೆ ನೀಡಿರುವ ಬಿಲ್‌ನಲ್ಲಿ ದುಪ್ಪಟ್ಟು ಹಣ ನೀಡಿರುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಎರಡು ತಿಂಗಳ ಬಿಲ್ ನೀಡಿದ್ದರೂ ಕೂಡ ಅದರಲ್ಲಿ ಎರಡು ತಿಂಗಳಿಗೆ ಸರಾಸರಿ ಬಳಕೆಯಾಗುವುದಕ್ಕಿಂತ ಹೆಚ್ಚುವರಿ ಶುಲ್ಕವನ್ನು ಮೆಸ್ಕಾಂ ನಮೂದಿಸಿದೆ ಎಂದು ಕೆಲವು ಗ್ರಾಹಕರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಶುಲ್ಕ ಪಾವತಿಸಿದವರಿಗೂ ಅಧಿಕ ಬಿಲ್

ಎಪ್ರಿಲ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಿದವರಿಗೆ ಮೇ ತಿಂಗಳ ಬಿಲ್ ನೀಡುವಾಗ ಎಪ್ರಿಲ್‌ನ ಹಣವನ್ನು ಕಡಿತಗೊಳಿಸಿ ನೀಡಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ಆದರೆ ಎಪ್ರಿಲ್‌ನಲ್ಲಿ ಬಿಲ್ ಪಾವತಿಸಿದವರಿಗೂ ಮೇಯಲ್ಲಿ ದುಪ್ಪಟ್ಟು ಬಿಲ್ ಬಂದಿದೆ. ಈ ಬಗ್ಗೆ ಪಾವೂರಿನ ಗ್ರಾಹಕರೊಬ್ಬರು ‘ನಮ್ಮ ಮನೆಯಲ್ಲಿ ನಾಲ್ಕು ಮಂದಿ ಇದ್ದೇವೆ. ವಿದ್ಯುತ್ ಬಳಕೆಯಲ್ಲಿ ಹೆಚ್ಚೂ ಆಗಿಲ್ಲ, ಕಡಿಮೆಯೂ ಆಗಿಲ್ಲ. ಸಾಮಾನ್ಯವಾಗಿ ನಮಗೆ 450 ರೂ.ನಿಂದ 500 ರೂ.ವರೆಗೆ ಬಿಲ್ ಬರುತ್ತದೆ. ಈ ಬಾರಿ ಅದು ಎರಡು ಪಟ್ಟು ಹೆಚ್ಚು ಬಂದಿದೆ. ಅಲ್ಲದೆ ಕಳೆದ ತಿಂಗಳ ಬಿಲ್ ಪಾವತಿಸಿದ್ದರೂ ಕೂಡ ಬಿಲ್ ಮೊತ್ತ ಯಾಕೆ ಹೆಚ್ಚು ಬಂತು ಅಂತ ಗೊತ್ತಾಗುತ್ತಿಲ್ಲ’ ಎಂದಿದ್ದಾರೆ.

ಗೃಹ ಬಳಕೆಯ ಜಕಾತಿಯಲ್ಲಿ ಸಾಮಾನ್ಯವಾಗಿ ಪ್ರತಿ ತಿಂಗಳಿನ ಮೊದಲ 30 ಯೂನಿಟ್‌ಗಳಿಗೆ 1 ಸ್ಲ್ಯಾಬ್ ದರ ಅನ್ವಯವಾದರೆ, ಮೇ ತಿಂಗಳಿನಲ್ಲಿ ನೀಡಲ್ಪಡುವ 2 ತಿಂಗಳ ಬಿಲ್‌ನಲ್ಲಿ 30 ಯೂನಿಟ್‌ಗಳ ಬದಲಾಗಿ ಒಟ್ಟು 2*30=60 ಯುನಿಟ್‌ಗಳಿಗೆ ಮೊದಲ ಸ್ಲ್ಯಾಬ್ ದರ ಅನ್ವಯವಾಗುತ್ತದೆ. ಅದರಂತೆಯೇ ಉಳಿದ ರೇಟ್ ಸ್ಲಾಬ್‌ಗಳೂ (2ನೇ ಸ್ಲ್ಯಾಬ್ 70 ಯೂನಿಟ್ ಬದಲಾಗಿ 140, 3ನೇ ಸ್ಲ್ಯಾಬ್ 100 ಯೂನಿಟ್ ಬದಲಾಗಿ 200) ಎರಡು ತಿಂಗಳಿನ ಲೆಕ್ಕದಲ್ಲಿಯೇ ಅನ್ವಯವಾಗುವುದರಿಂದ ಗ್ರಾಹಕರಿಗೆ ಯಾವುದೇ ತರಹದ ನಷ್ಟವಾಗುವುದಿಲ್ಲ. ಈ ರೀತಿ ಇತರ ಜಕಾತಿಗಳಿಗೂ ಬಿಲ್ಲಿಂಗ್ ಮಾಡಲಾಗುತ್ತದೆ ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಮಗೆ ಸರಾಸರಿ 900 ರೂ. ಅಥವಾ 1,100 ರೂ. ಬಿಲ್ ಬರುತ್ತಿತ್ತು. ಆದರೆ, ಈ ಬಾರಿ ಬಿಲ್ ನಾಲ್ಕು ಪಟ್ಟು ಅಧಿಕ ಬಂದಿದೆ. ನಿಗದಿತ ಅವಧಿಯೊಳಗೆ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಾರೋ ಎಂಬ ಆತಂಕವಿದೆ. ಇದು ನನಗೆ ಮಾತ್ರವಲ್ಲ, ಅಕ್ಕಪಕ್ಕದ ಮನೆಯವರಿಗೂ ಹೀಗೆ ಬಿಲ್ ಬಂದಿದೆ. ಹಾಗಾಗಿ ಮೆಸ್ಕಾಂ ಅಧಿಕಾರಿಗಳು ಆದ ಲೋಪವನ್ನು ಸರಿಪಡಿಸಬೇಕು.

ಮುಬೀನ್ ಅಹ್ಮದ್, ತೊಕ್ಕೊಟ್ಟು

ಮೆಸ್ಕಾಂ ಗ್ರಾಹಕ

ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಸರಕಾರದಿಂದ ಯಾವ ಸೂಚನೆಯೂ ಬಂದಿಲ್ಲ. ಆದರೆ, ಬಿಲ್ ಪಾವತಿಗೆ ಕೆಲಕಾಲ ವಿನಾಯಿತಿ ನೀಡಿದೆ. ಅಂದರೆ ಜೂನ್ 10ರೊಳಗೆ ಬಿಲ್ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಆ ಬಳಿಕ ಬಡ್ಡಿ ವಿಧಿಸಲಾಗುವುದು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಹೆಚ್ಚುವರಿ ಬಿಲ್ ಬಂದಿದ್ದರೂ ಕೂಡ ಈ ತಿಂಗಳಲ್ಲಿ ನಡೆಯುವ ಮೀಟರ್ ರೀಡಿಂಗ್ ಸಂದರ್ಭ ಸರಿಪಡಿಸಲಾಗುವುದು.

ಸ್ನೇಹಲ್ ಆರ್.

ವ್ಯವಸ್ಥಾಪಕ ನಿರ್ದೇಶಕಿ, ಮೆಸ್ಕಾಂ

ಕೋವಿಡ್-19 ಮತ್ತು ಲಾಕ್‌ಡೌನ್‌ನಿಂದಾಗಿ ಸರಕಾರದ ಸೂಚನೆಯಂತೆ ಎಪ್ರಿಲ್‌ನಲ್ಲಿ ಮೆಸ್ಕಾಂ ಗ್ರಾಹಕರಿಗೆ ಸರಾಸರಿ ವಿದ್ಯುತ್ ಬಿಲ್ಲನ್ನು ನೀಡಲಾಗಿರುತ್ತದೆ. ಮೇಯಲ್ಲಿ ಮಾಪಕ ಓದುಗರು ಮನೆ ಮನೆಗೆ ತೆರಳಿ ಮಾಪಕದ ಆ್ಯಕ್ಚುವಲ್ ರೀಡಿಂಗ್‌ನ್ನು ನಮ್ಮ ಬಿಲ್ಲಿಂಗ್ ಯಂತ್ರದಲ್ಲಿ ದಾಖಲಿಸಿ, ಎಪ್ರಿಲ್ ಮತ್ತು ಮೇ ಎರಡೂ ತಿಂಗಳ ಯುನಿಟ್ ಸೇರಿಸಿ ಒಂದೇ ಬಿಲ್ ಪ್ರತಿಯನ್ನು ನೀಡುತ್ತಾರೆ. ಹಾಗೆ ಬಿಲ್ ನೀಡುವಾಗ ಪ್ರತಿ ತಿಂಗಳಿಗೆ ಅನ್ವಯವಾಗುವ ರೇಟ್ ಸ್ಲ್ಯಾಬ್‌ಗಳನ್ನು ಗಣನೆಗೆ ತೆಗೆದುಕೊಂಡು ಎರಡೂ ತಿಂಗಳಿಗೆ ಅನ್ವಯಿಸಿ ಬಿಲ್ಲಿಂಗ್ ಮಾಡಲಾಗುತ್ತದೆ. ಗ್ರಾಹಕರಿಗೆ ಯಾವುದೇ ಗೊಂದಲ ಬೇಡ.

-ಕೃಷ್ಣರಾಜ್, ಮೆಸ್ಕಾಂ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News