ಹೆಜಮಾಡಿ ತಪಾಸಣಾ ಕೇಂದ್ರಕ್ಕೆ ಡಿಸಿ ಭೇಟಿ
ಪಡುಬಿದ್ರಿ: ಹೊರ ರಾಜ್ಯ ಹಾಗೂ ವಿದೇಶಗಳಿಂದ ಆಗಮಿಸುವವರಿಗೆ ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಹೆಜಮಾಡಿಯ ತಪಾಸಣಾ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೆಜಮಾಡಿಗೆ ಶನಿವಾರ ಭೇಟಿ ನೀಡಿ ಸಿದ್ದತೆ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ತಪಾಸಣಾ ಕೇಂದ್ರವನ್ನು ವಿಸ್ತಾರಗೊಳಿಸಲು ಹಾಗೂ ಕೇಂದ್ರಕ್ಕೆ ಬೇಕಾದ ಎಲ್ಲಾ ಮೂಲಸೌಕರ್ಯಗಳನ್ನು ವ್ಯವಸ್ಥೆಗೊಳಿಸುವಂತೆಯೂ ಸೂಚಿಸಿದರು.
ವಿದೇಶದಿಂದ ಆಗಮಿಸುವವರನ್ನು ಬಂದ ವಾಹನದಿಂದಿಳಿಸಿ ತಪಾಸಣೆ ಬಳಿಕ ಅದೇ ವಾಹನದಲ್ಲಿ ಪೊಲೀಸ್ ಬೆಂಗಾವಲಿನಲ್ಲಿ ಕ್ವಾರಂಟೈನ್‍ಗೊಳಪಡುವ ಕಡೆ ಕರೆದುಕೊಂಡು ಹೋಗುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೋಂ ಕ್ವಾರಂಟೈನ್ ಬದಲು ಇನ್‍ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ನಿರ್ದೇಶನ ನೀಡಿದರು.
ಮಂಗಳೂರಿನಲ್ಲಿ ವ್ಯವಹಾರ ನಡೆಸುವ ಉಡುಪಿ ಜಿಲ್ಲೆಯ ಮಂದಿಗೆ ಮಳಿಗೆಯನ್ನು ತೆರೆಯಲು ಸಂಚರಿಸುವ ಮಂದಿಗೆ ಗಡಿಯಲ್ಲಿ ಆಗುತ್ತಿರುವ ತೊಂದರೆ ಬಗ್ಗೆ ಗಮನಸೆಳೆಯಲಾಯಿತು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಒಂದೇ ಯೂನಿಟ್ ಎಂದು ರಾಜ್ಯ ಸರ್ಕಾರ ಘೋಷಿಸಿದಲ್ಲಿ ಮಾತ್ರ ಈ ಜಿಲ್ಲೆಯವರು ಅಲ್ಲಿ, ಅಲ್ಲಿನವರು ಇಲ್ಲಿರುವ ವ್ಯಾಪಾರ ಮಳಿಗೆಗಳನ್ನು ತೆರೆಯಲು ಅವಕಾಶ ಲಭಿಸಬಹುದು. ಸರ್ಕಾರ ನಿರ್ಧರಿಸದೆ ಈ ಬಗ್ಗೆ ಸೂಕ್ತ ಪಾಸ್ ನೀಡಲು ಜಿಲ್ಲಾಡಳಿತದಿಂದ ಸಾಧ್ಯವಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಕಾಪು ತಹಶೀಲ್ದಾರ್ ಮುಹಮ್ಮದ್ ಇಸಾಕ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಪಡುಬಿದ್ರಿ ಎಸ್‍ಐ ಸುಬ್ಬಣ್ಣ, ಹೆಜಮಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧಾಕರ ಕರ್ಕೇರ, ಗ್ರಾಮಕರಣಿಕ ಅರುಣ್ ಕುಮಾರ್ ಉಪಸ್ಥಿತರಿದ್ದರು.