×
Ad

ಮಹಿಳೆಗೆ ಹಲ್ಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಸಮತಾ ಸೈನಿಕದಳ ಆಗ್ರಹ

Update: 2020-05-09 19:03 IST

ಉಡುಪಿ, ಮೇ 9: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ವ್ಯಸನಿಗಳು ಮಹಿಳೆ ಮೇಲೆ ನಡೆಸಿರುವ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸಮತಾ ಸೈನಿಕ ದಳ ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ವಿಶ್ವನಾಥ್ ಪೇತ್ರಿ, ಮೇ 5ರಂದು ಬೆಳಗ್ಗೆ ಸ್ಥಳೀಯ ನಿವಾಸಿಗಳಾದ ಧನುಷ್, ಕೌಶಿಕ್, ಸೌರಭ್, ಉಜ್ವಲ್, ಕಾರ್ತಿಕ್, ಕಿರಣ್, ಉದಯ ಶೆಟ್ಟಿ ಹಾಗೂ ಇತರರು ಸೇರಿಕೊಂಡು ಹೆರಾಡಿ ಗ್ರಾಪಂ ವ್ಯಾಪ್ತಿಯ ಹೊಸಾಳ ನಿವಾಸಿ ಗಣೇಶ್ ಎಂಬವರ ಪತ್ನಿ ಜಯಲಕ್ಷ್ಮೀ ಎಂಬವರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಆರೋಪಿಗಳು ಗಾಂಜಾ ವ್ಯಸನಿಗಳಾಗಿದ್ದು, ಜಯಲಕ್ಷ್ಮೀ ಪತಿ ಇವರಿಗೆ ಮನೆ ಬಳಿ ಗಾಂಜಾ ಸೇವನೆ ಮಾಡಬಾರದು ಎಂದು ಹೇಳಿದಕ್ಕೆ ಈ ಹಲ್ಲೆ ಮಾಡಲಾಗಿದೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಈ ಪ್ರಕರಣದ ಹಿಂದೆ ಇರುವ ಕಾಣದ ಕೈಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕು. ಐದು ದಿನಗಳಲ್ಲಿ ಕ್ರಮ ಜರಗಿಸದಿದ್ದರೆ ಠಾಣೆಯ ಎದುರು ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಕರ ಸೂರ್ಗೋಳಿ, ಭೀಮ್ ಆರ್ಮಿ ಅಧ್ಯಕ್ಷ ಪ್ರಕಾಶ್ ಹೇರೂರು, ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಬ್ರಹ್ಮಾವರ, ಮಹಿಳಾ ಘಟಕದ ಜಿಲ್ಲಾಧ್ಯಕೆ್ಷ ಜ್ಯೋತಿ ಸಿರಿಯಾರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News