×
Ad

ದೇವಸ್ಥಾನ ತೆರೆಯುವ ಬಗ್ಗೆ ಪರಿಶೀಲಿಸಿ ತೀರ್ಮಾನ: ಸಚಿವ ಕೋಟ

Update: 2020-05-09 19:08 IST

ಕುಂದಾಪುರ, ಮೇ 9: ಲಾಕ್‌ಡೌನ್‌ನಿಂದ ಭಕ್ತರಿಗೆ ಪ್ರವೇಶ ಇಲ್ಲದಿದ್ದರೂ ದೇವಸ್ಥಾನಗಳಲ್ಲಿ ತ್ರಿಕಾಲ ಪೂಜೆಯೂ ಸೇರಿದಂತೆ ಎಲ್ಲ ಪೂಜೆ ಪುರಸ್ಕಾರಗಳು ನಡೆಯುತ್ತಿವೆ. ದೇವಸ್ಥಾನಗಳನ್ನು ತೆರೆಯುವ ಇಚ್ಛೆ ಸರಕಾರಕ್ಕೆ ಇದ್ದರೂ ಎ ದರ್ಜೆ ದೇವಸ್ಥಾನಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಮಸ್ಯೆ ಉಂಟಾಗುವುದರಿಂದ ಈ ಬಗ್ಗೆ ಪರಿಶೀಲನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ, ಕಾಸರಗೋಡು, ಶಿವಮೊಗ್ಗ, ಚಿಕ್ಕಮಗಳೂರಿನ ಒಟ್ಟು 1800 ಮಂದಿ ಯಕ್ಷಗಾನ ಕಲಾವಿದರು ಮತ್ತು ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಶನಿವಾರ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಅನ್ನಛತ್ರ ಸಭಾಂಗಣದಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ದೇವಸ್ಥಾನದ ಅರ್ಚಕರಿಗೆ ತಸ್ತಿಕ್ ಜೊತೆ ಆರ್ಥಿಕ ನೆರವು ನೀಡಬೇಕೆಂಬ ಬೇಡಿಕೆ ಬಂದಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಅದಕ್ಕೆ ಅವರು ಒಪಿದ್ದು, ಇಂದು ಅಥವಾ ನಾಳೆ ಅರ್ಚರಿಗೂ ಪರಿಹಾರವನ್ನು ಘೋಷಣೆ ಮಾಡಲಿದ್ದಾರೆ. ಅದಕ್ಕೆ ಬೇಕಾದ ಆರ್ಥಿಕ ನೆರವನ್ನು ಸರಕಾರ ಮತ್ತು ಇಲಾಖೆ ಒಟ್ಟಾಗಿ ನೀಡುವ ಸಲಹೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದರು.

ಧಾರ್ಮಿಕ ದತ್ತಿ ಇಲಾಖೆಯ ಎ ದರ್ಜೆ ದೇವಸ್ಥಾನಗಳಲ್ಲಿ ಈವರೆಗೆ ಏಳೂವರೆ ಲಕ್ಷಕ್ಕೂ ಅಧಿಕ ಲಾಕ್‌ಡೌನ್ ಸಂತ್ರಸ್ತರಿಗೆ ಊಟ ವಿತರಿಸಲಾಗಿದೆ. ಎ,ಬಿ,ಸಿ ದರ್ಜೆಯ ದೇವಸ್ಥಾನಗಳ 34ಸಾವಿರಕ್ಕೂ ಅಧಿಕ ಅರ್ಚಕರಿಗೆ ಆಹಾರ ಕಿಟ್ ನೀಡುವಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಉಡುಪಿ ಜಿಲ್ಲೆಯ 900ಕ್ಕೂ ಅಧಿಕ ಅರ್ಚಕರಿಗೆ ಕಿಟ್ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಉಚಿತ ಸಾಮೂಹಿಕ ವಿವಾಹದ ಕುರಿತು ಧಾರ್ಮಿಕ ಪರಿಷತ್ ಸಭೆಯಲ್ಲಿ ಚರ್ಚೆ ನಡೆಸಿ ಸೂಕ್ತ ದಿನಾಂಕ ಪ್ರಕಟ ಮಾಡಲಾಗುವುದು ಎಂದ ಅವರು, ಫೋಟೋಗ್ರಾಫರ್, ಶಾಮಿಯಾನ ಕಾರ್ಮಿಕರು, ಟೈಲರ್‌ಗಳಿಗೂ ವಿಶೇಷ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಪರಿಶೀಲಿಸುವ ಭರವಸೆ ನೀಡಿದ್ದಾರೆ. ಹಲವು ಮಂದಿ ಅವರವರ ವೃತ್ತಿ ಹಾಗೂ ಸಮಾಜದ ಆಧಾರದಲ್ಲಿ ಬೇಡಿಕೆಯನ್ನು ಇಟ್ಟಿದ್ದು, ಎಲ್ಲರ ಬೇಡಿಕೆ ಈಡೇರಿಕೆ ಸಲುವಾಗಿ ಸರಕಾರ ತೀರ್ಮಾನ ಕೈಗೊಳ್ಳಲಿದೆ. ಪತ್ರಕರ್ತರಿಗೆ ಪ್ಯಾಕೇಜ್ ಒದಗಿಸುವ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಲಾಗುವುದು ಎಂದರು.

ಕಲಾವಿದರಿಗೆ ಕಿಟ್ ಗಳನ್ನು ವಿತರಿಸಲು ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರ್ ಅವರಿಗೆ ಕಿಟ್ ಗಳನ್ನು ಹಸ್ತಾಂತರಿಸಲಾಯಿತು. ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ, ಸಹಾಯಕ ಕಾರ್ಯನಿವಾರ್ಹಣಾಧಿಕಾರಿ ಕೃಷ್ಣಮೂರ್ತಿ, ಪ್ರಮುಖರಾದ ಪಿ.ಕಿಶನ್ ಹೆಗ್ಡೆ, ಎಸ್.ವಿ.ಭಟ್, ಗಂಗಾಧರ ರಾವ್, ನಾರಾಯಣ ಹೆಗಡೆ, ಗಣೇಶ್ ಬ್ರಹ್ಮಾವರ, ಅಜಿತ್ ರಾವ್, ರಾಜೇಶ್ ನಾವಡ, ಎಚ್.ಎನ್.ವೆಂಕಟೇಶ್, ಕಿಶೋರ್ ಆಚಾರ್ಯ, ಸನಕ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.

ರೈಲ್ವೆ ಬೇಡಿಕೆ ಬಗ್ಗೆ ಸಚಿವರೊಂದಿಗೆ ಚರ್ಚೆ
ಮುಂಬೈನಿಂದ ಉಡುಪಿ ಜಿಲ್ಲೆಗೆ ಬರುವರು ಆ್ಯಪ್ ಮೂಲಕ ಪಾಸ್ ಪಡೆದು ಸರಕಾರ ನಿಗದಿ ಪಡಿಸಿದ ಸ್ಥಗಳಲ್ಲಿ ಕ್ವಾರೆಂಟೈನ್‌ನಲ್ಲಿ ಇರಬೇಕು. 4500-5000 ಮಂದಿ ಈಗಾಗಲೇ ಅರ್ಜಿ ಸಲ್ಲಿಸಿದ್ದು, ಇನ್ನು ಸಾವಿರಾರು ಮಂದಿ ಅರ್ಜಿ ಸಲ್ಲಿಸುವರಿದ್ದಾರೆ. ದಿನಕ್ಕೆ 500-600 ಮಂದಿ ಕರೆಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಹೊರಗಿಂದ ಬಂದವರು ಮನೆಗಳಿಗೆ ಹೋಗಿ ಸ್ಥಳೀಯವಾಗಿ ಆತಂಕ ಸೃಷ್ಟಿಸ ಬಾರದು. ಎಲ್ಲರು ತಾಳ್ಮೆಯಿಂದ ಸರಕಾರದ ಆದೇಶ ಪಾಲನೆ ಮಾಡಬೇಕು. ಹೊರ ರಾಜ್ಯದಲ್ಲಿರುವ ಕೆಲವರು ರೈಲಿನ ಬೇಡಿಕೆ ಇಟ್ಟಿದ್ದು ಈ ಕುರಿತು ರೈಲ್ವೆ ಸಚಿವರ ಜೊತೆ ಮಾತನಾಡಲಾಗುುದು ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News