×
Ad

‘ವಂದೇ ಭಾರತ್ ಮಿಷನ್’ನ ಏರ್ ಇಂಡಿಯಾ ವಿಮಾನದ ಕಮಾಂಡರ್ ಮಂಗಳೂರಿಗ ಮೈಕೆಲ್ ಸಲ್ದಾನಾ

Update: 2020-05-09 19:34 IST
ಮೈಕೆಲ್ ಸಲ್ದಾನಾ

ಮಂಗಳೂರು, ಮೇ 9: ಕೊರೋನ-ಲಾಕ್‌ಡೌನ್‌ನಿಂದ ವಿದೇಶಗಳಲ್ಲಿ ಸಿಲುಕಿರುವ ಅನಿವಾಸಿ ಅತಂತ್ರ ಭಾರತೀಯರನ್ನು ವಾಪಸ್ ಕರೆತರುವ ‘ವಂದೇ ಭಾರತ್ ಮಿಷನ್’ ಏರ್‌ಲಿಫ್ಟ್‌ನ ಮೊದಲ ದಿನದ ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್- ಫ್ಲೈಟ್ ಕಮಾಂಡರ್ ಮೈಕೆಲ್ ಸಲ್ದಾನಾ ಮಂಗಳೂರಿನವರು ಎಂಬುದು ಕರಾವಳಿಗರಿಗೆ ಹೆಮ್ಮೆಯ ವಿಚಾರವಾಗಿದೆ.

ಇವರು ಕಮಾಂಡರ್ ಆಗಿದ್ದ ಏರ್ ಇಂಡಿಯಾ ವಿಮಾನವು 177 ಪ್ರಯಾಣಿಕರನ್ನು ಹೊತ್ತು ಮೇ 7ರ ಸಂಜೆ 5:30ಕ್ಕೆ ದುಬೈನಿಂದ ಹೊರಟು ರಾತ್ರಿ 10:30ಕ್ಕೆ ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು.

ಈ ಮಧ್ಯೆ ಸಿಂಗಾಪುರದಿಂದ ವೈದ್ಯಕೀಯ ಸಲಕರಣೆ ಹೊತ್ತು ತಂದ ವಿಮಾನದ ಪೈಲಟ್ ಆಗಿದ್ದ ಸರ್ಫರಾಝ್ ಕೂಡ ಮಂಗಳೂರಿಗರಾಗಿದ್ದು, ಇವರಿಬ್ಬರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿವೆ.

ನಗರದ ವೆಲೆನ್ಸಿಯಾ ನಿವಾಸಿಯಾಗಿರುವ ಮೈಕೆಲ್ ಸಲ್ದಾನಾ ಮಿಲಾಗ್ರಿಸ್ ಮತ್ತು ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿ. ಬೆಂಗಳೂರಿನ ಆರ್‌ವಿ ಇಂಜಿನಿಯರಿಂಗ್‌ನಲ್ಲಿ ಮೊದಲ ರ್ಯಾಂಕ್ ಪಡೆದ ಪ್ರತಿಭಾನ್ವಿತ ಕೂಡ. ಇಂಜಿನಿಯರಿಂಗ್ ಮುಗಿದ ಬಳಿಕ ಏರ್ ಇಂಡಿಯಾ ಸೇವೆಗೆ ಸೇರಿದ್ದರು. ತುಂಬ ಕ್ಲಿಷ್ಟಕರವಾದ ಮಂಗಳೂರಿನಂತಹ ಟೇಬಲ್‌ಟಾಪ್ ಏರ್‌ಪೋರ್ಟ್‌ಗಳಲ್ಲಿ ವಿಮಾನ ನಿಭಾಯಿಸುವ ಚಾಣಾಕ್ಷತೆ ಇವರದ್ದಾಗಿದೆ.

ಪ್ರಸ್ತುತ ಮಂಗಳೂರಿನಲ್ಲಿ ಪೈಲಟ್‌ಗಳಿಗೆ ತರಬೇತಿ ನೀಡುವ ಬೇಸ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಅಧೀನದಲ್ಲಿ 30 ಪೈಲಟ್‌ಗಳಿದ್ದಾರೆ. ಇವರ ಅಜ್ಜ ಕರ್ನಲ್ ಜೆ.ಡಬ್ಲ್ಯೂ ಸೊರೆಸ್ ದ್ವಿತೀಯ ವಿಶ್ವ ಯುದ್ಧದಲ್ಲಿ ಹೋರಾಟ ಮಾಡಿದವರು. 1962ರ ಚೀನಾ ಯುದ್ಧದಲ್ಲೂ ಕರ್ನಲ್ ಜೆ. ಡಬ್ಲೂ ಪಾಲ್ಗೊಂಡಿದ್ದರು.

ಈ ಬಗ್ಗೆ ‘ವಾರ್ತಾಭಾರತಿ’ಯ ಜೊತೆ ಮಾತನಾಡಿದ ಮೈಕಲ್ ಸಲ್ದಾನ ‘ಕೊರೋನದಿಂದ ಭಾರತದ ಲಕ್ಷಾಂತರ ಜನರು ವಿದೇಶಗಳಲ್ಲಿ ಸಿಲುಕಿ ತುಂಬಾ ಕಷ್ಟಪಡುತ್ತಿರುವಾಗ ಅವರನ್ನು ತವರೂರಿಗೆ ವಾಪಸ್ ಕರೆತರುವುದು ಹೆಮ್ಮೆಯ ವಿಚಾರವಾಗಿದೆ. ಹಾಗಾಗಿಯೇ ನಾನು ಏರ್‌ಲಿಫ್ಟ್ ಮಾಡಲು ಸ್ವಯಂ ಪ್ರೇರಣೆಯಿಂದ ಒಪ್ಪಿಕೊಂಡೆ. ಮೇ 7ರಂದು ಅಬುದಾಭಿಯಿಂದ ಕೊಚ್ಚಿಗೆ ಮತ್ತು ದುಬೈಯಿಂದ ಕಲ್ಲಿಕೋಟೆಗೆ ತಲಾ 177 ಮಂದಿ ಪ್ರಯಾಣಿಕರನ್ನು ಹೊತ್ತುಕೊಂಡು ಎರಡು ವಿಮಾನ ಹೊರಟಿತ್ತು. ನಾನು ದುಬೈಯಿಂದ ಕಲ್ಲಿಕೋಟೆಗೆ ಹೊರಟ ವಿಮಾನದ ಕಮಾಂಡರ್ ಆಗಿದ್ದೆ. ಅವರನ್ನು ಸುರಕ್ಷಿತವಾಗಿ ಕರೆತಂದ ತೃಪ್ತಿ ನನಗೆ ಇದೆ. ಇದೀಗ ಮನೆಯಲ್ಲೇ ವಿಶ್ರಾಂತಿಯಲ್ಲಿರುವೆ. ಮುಂದೆಯೂ ದೇಶದ ಜನರನ್ನು ಕರೆತರಲು ನಾನು ಸದಾ ಸಿದ್ಧನಿದ್ದೇನೆ’ ಎಂದು ಹೇಳಿದ್ದಾರೆ.

‘ಮೇ 6ರಂದು ಮಧ್ಯಾಹ್ನ ಮಂಗಳೂರಿನ ವೆಲೆನ್ಸಿಯಾದಲ್ಲಿದ್ದ ನನ್ನ ಮನೆಯಿಂದ ಕೇರಳದ ಕಲ್ಲಿಕೋಟೆಗೆ ತೆರಳಿದ್ದೆ. ಅಲ್ಲಿಯ ವಿಮಾನ ನಿಲ್ದಾಣದಿಂದ ಸ್ಯಾನಿಟೈಸ್ ಮಾಡಲಾಗಿದ್ದ ಖಾಲಿ ವಿಮಾನವನ್ನು ದುಬೈಗೆ ಕೊಂಡೊಯ್ದಿದ್ದೆ. ಅಲ್ಲಿನ ವಿಮಾನ ನಿಲ್ದಾಣದಲ್ಲಿದ್ದ 177 ಪ್ರಯಾಣಿಕರಲ್ಲಿ 5 ಮಕ್ಕಳು, 8 ಗರ್ಭಿಣಿಯರು, 9 ವೀಲ್‌ಚೇರ್ ಬಳಸುತ್ತಿದ್ದ ಪ್ರಯಾಣಿಕರು ಸೇರಿದ್ದರು. ಮೇ 7ರಂದು ಅವರನ್ನು ಕಲ್ಲಿಕೋಟೆಗೆ ಮರಳಿ ಕರೆತಂದಾಗ ತುಂಬಾ ಖುಷಿಯಾಯಿತು. ಯಾಕೆಂದರೆ ಇದೆಲ್ಲಾ ಕೊರೋನ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದ ಒಂದು ಭಾಗ ಎಂದು ನಾನು ಭಾವಿಸಿದ್ದೇನೆ’ ಎಂದು ಮೈಕಲ್ ಹೇಳುತ್ತಾರೆ.

ಏರ್‌ಲಿಫ್ಟ್ ಮಾಡಲು ನನ್ನನ್ನು ಯಾರೂ ಒತ್ತಾಯಿಸಿರಲಿಲ್ಲ. ಆದರೆ ಈ ಕೆಲಸ ತುಂಬಾ ರಿಸ್ಕ್‌ನದ್ದಾಗಿತ್ತು. ನಾನು ಸಹಿತ ಎಲ್ಲ ಸಿಬ್ಬಂದಿಯೂ ಏರ್‌ಲಿಫ್ಟ್‌ನ ಪ್ರಕ್ರಿಯೆಯುದ್ದಕ್ಕೂ ಪಿಪಿಇ ಕಿಟ್ ಧರಿಸಿಕೊಂಡಿದ್ದೆವು. ಆದರೆ, ಈವತ್ತು ಬಂದ ವರದಿಯಲ್ಲಿ ಮೇ 7ರಂದು ಕೊಚ್ಚಿ ಮತ್ತು ಕಲ್ಲಿಕೋಟೆಗೆ ಲ್ಯಾಂಡ್ ಆಗಿದ್ದ ಎರಡೂ ವಿಮಾನದಲ್ಲಿ ತಲಾ ಒಬ್ಬೊಬ್ಬರಿಗೆ ಕೊರೋನ ಪಾಸಿಟಿವ್ ಇರುವುದು ದೃಢಗೊಂಡಿವೆ. ಹಾಗಾಗಿ ನಾನು ಕೂಡ ಸದ್ಯ ಕ್ವಾರಂಟೈನ್‌ನಲ್ಲಿರಬೇಕಿದೆ.

ಏರ್‌ಲಿಫ್ಟ್‌ಗೆ ಹೋಗುವ ಮೊದಲು ಕೋವಿಡ್-19 ಟೆಸ್ಟ್‌ಗೆ ಒಳಗಾಗಿದ್ದೆ. ಏರ್‌ಲಿಫ್ಟ್ ಪ್ರಕ್ರಿಯೆ ಮುಗಿದು ವಿಮಾನ ಲ್ಯಾಂಡ್ ಆದ ಬಳಿಕವೂ ಕೋವಿಡ್ ಪರೀಕ್ಷೆಗೆ ಸ್ಯಾಂಪಲ್ ನೀಡಿದ್ದೇನೆ. ಮತ್ತೊಮ್ಮೆ ಏರ್‌ಲಿಫ್ಟ್ ಮಾಡಬೇಕಾದರೆ 5 ದಿನ ಬಳಿಕ ಪರೀಕ್ಷೆ ಮಾಡಿಸಿ ನೆಗೆಟಿವ್ ಎಂದು ವರದಿ ಬರಬೇಕು. ನಾನು ಯಾವತ್ತೂ ಕೂಡ ಸೇವೆಗೆ ಸಿದ್ಧನಿದ್ದೇನೆ ಎಂದು ಮೈಕೆಲ್ ಸಲ್ದಾನಾ ನುಡಿದರು.

ವಿದೇಶದಲ್ಲಿ ಸಂಕಷ್ಟದಲ್ಲಿದ್ದ ನಮ್ಮವರನ್ನು ವಾಪಸ್ ಜನ್ಮಭೂಮಿಗೆ ಕರೆತಂದಾಗ ತುಂಬಾ ಖುಷಿಯಾಗಿತ್ತು. ಇದು ದೇಶಪ್ರೇಮದ ಕೆಲಸವಾಗಿದೆ. ಇನ್ನು ಮುಂದೆಯೂ ನಾನು ಈ ಸೇವೆಗೆ ಸದಾ ಸಿದ್ಧನಾಗಿದ್ದೇನೆ ಎಂದು ಮೈಕೆಲ್ ಸಲ್ದಾನಾ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News