×
Ad

ಉಡುಪಿ: ಹೊರರಾಜ್ಯದಿಂದ ಬಂದ 223 ಮಂದಿ ಕ್ವಾರಂಟೈನ್‌ನಲ್ಲಿ

Update: 2020-05-09 20:54 IST

ಉಡುಪಿ, ಮೇ 9: ನೋವೆಲ್ ಕೊರೋನ ವೈರಸ್ (ಕೋವಿಡ್-19) ನಿಯಂತ್ರಣಕ್ಕಾಗಿ ಕಳೆದ ಮಾ.23ರಂದು ದೇಶಾದ್ಯಂತ ಲಾಕ್‌ಡೌನ್‌ನ್ನು ಘೋಷಿಸಿದ ಮೇಲೆ ಹೊರರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡ ಕರ್ನಾಟಕದ ಸಾವಿರಾರು ಮಂದಿ ಇದೀಗ ದೊರಕಿದ ಮೊದಲ ಅವಕಾಶಗಳಲ್ಲಿಯೇ ರಾಜ್ಯಕ್ಕೆ ಮರಳ ತೊಡಗಿದ್ದು, ಮೇ 5ರಿಂದ ಪ್ರಾರಂಭಿಸಿ ಇಂದು ಅಪರಾಹ್ನದವರೆಗೆ ಒಟ್ಟು 223 ಮಂದಿ ಮರಳಿ ಬಂದು ಇಲ್ಲಿ ವ್ಯವಸ್ಥೆಗೊಳಿಸಲಾದ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಉಳಿದುಕೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ಹಾಗೂ ಜಿಲ್ಲಾ ಕೊರೋನ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಇವರಲ್ಲಿ ತೆಲಂಗಾಣ ರಾಜ್ಯದಿಂದ 176, ತಮಿಳುನಾಡಿನಿಂದ 16, ಮಹಾರಾಷ್ಟ್ರದಿಂದ 15, ಆಂಧ್ರಪ್ರದೇಶದಿಂದ 7, ಗುಜರಾತ್‌ನಿಂದ 5, ಗೋವಾದಿಂದ 2 ಹಾಗೂ ಕೇರಳದಿಂದ ಇಬ್ಬರು ಕರ್ನಾಟಕಕ್ಕೆ ಮರಳಿ ಬಂದಿದ್ದಾರೆ. ಇವರಲ್ಲಿ ಪುರುಷರು 172 ಮಂದಿ ಇದ್ದರೆ, ಮಹಿಳೆಯರು 44 ಮಂದಿ ಹಾಗೂ ಉಳಿದವರು ಮಕ್ಕಳು ಎಂದವರು ವಿವರಿಸಿದರು.

ತೆಲಂಗಾಣದಿಂದ ಕುಂದಾಪುರಕ್ಕೆ 76, ಬೈಂದೂರಿಗೆ 96 ಹಾಗೂ ಕಾರ್ಕಳಕ್ಕೆ 16 ಮಂದಿ ಆಗಮಿಸಿದ್ದಾರೆ. ತಮಿಳುನಾಡಿನಿಂದ ಕಾರ್ಕಳಕ್ಕೆ 10, ಉಡುಪಿಗೆ 3, ಕಾಪುಗೆ 3 ಆಗಮಿಸಿದ್ದರೆ, ಮಹಾರಾಷ್ಟ್ರದಿಂದ ಕಾರ್ಕಳಕ್ಕೆ 7, ಉಡುಪಿಗೆ 4 ಹಾಗೂ ಬೈಂದೂರಿಗೆ ಒಬ್ಬರು ಬಂದಿದ್ದಾರೆ.

ಆಂಧ್ರಪ್ರದೇಶದಿಂದ ಕುಂದಾಪುರಕ್ಕೆ ಇಬ್ಬರು, ಕಾರ್ಕಳಕ್ಕೆ 7 ಹಾಗೂ ಉಡುಪಿಗೆ 4 ಆಗಮಿಸಿದ್ದಾರೆ. ಗುಜರಾತ್‌ನ ಐವರು ಕಾರ್ಕಳ (4) ಮತ್ತು ಉಡುಪಿಗೆ ಬಂದಿದ್ದರೆ, ಕೇರಳದ ಇಬ್ಬರು ಉಡುಪಿಗೆ ಬಂದಿದ್ದಾರೆ. ಗೋವಾದಿಂದ ತಲಾ ಒಬ್ಬರು ಬೈಂದೂರು ಹಾಗೂ ಕಾರ್ಕಳಕ್ಕೆ ಆಗಮಿಸಿದ್ದಾರೆ.

ಕಳೆದೆರಡು ದಿನಗಳಿಂದ ಹೊರರಾಜ್ಯ ಹಾಗೂ ಹೊರಜಿಲ್ಲೆಗಳಿಂದ ಜಿಲ್ಲೆಯ 12 ಚೆಕ್‌ಪೋಸ್ಟ್‌ಗಳ ಮೂಲಕ ಬಂದವರು ಒಟ್ಟು 2453 ಮಂದಿ. ಇವರಲ್ಲಿ ಹೊರರಾಜ್ಯದವರು ಸರಕಾರಿ ಕ್ವಾರಂಟೈನ್‌ನಲ್ಲಿ ಇದ್ದರೆ, ಹೊರಜಿಲ್ಲೆಯಿಂದ ಬಂದು ರೋಗ ಲಕ್ಷಣಗಳಿಲ್ಲದವರನ್ನು ಹೋಮ್ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ತಪಾಸಣೆ ವೇಳೆ ಜ್ವರ, ಕೆಮ್ಮು, ಶೀತದ ಗುಣಲಕ್ಷಣಗಳಿದ್ದರೆ ಅವರನ್ನು ಫೀವರ್ ಕ್ಲಿನಿಕ್‌ಗೆ ಕಳುಹಿಸಿ ತಪಾಸಣೆಯ ಬಳಿಕ ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ ಎಂದು ಡಾ.ಸೂಡ ತಿಳಿಸಿದರು.

ವಿದೇಶಗಳಿಂದ ಆಗಮಿಸುವವರಿಗೆ ಸರಕಾರಿ (ಸಾಂಸ್ಥಿಕ) ಕ್ವಾರಂಟೈನ್ ನೊಂದಿಗೆ ಅವರಿಗೆ ಇಷ್ಟದ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ಗೆ ಅವಕಾಶ ಮಾಡಿ ಕೊಡಲಾಗುವುದು. ಆದರೆ ಅದಕ್ಕೆ ಅವರೇ ವೆಚ್ಚಮಾಡಬೇಕಾಗುತ್ತದೆ ಎಂದವರು ವಿವರಿಸಿದರು.

ಮಾ.23ರಂದು ದೇಶದಲ್ಲಿ ಲಾಕ್‌ಡೌನ್ ಮಾಡಿದ ನಂತರ ಈವರೆಗೆ ಉಡುಪಿ ಜಿಲ್ಲೆಯನ್ನು ಪ್ರವೇಶಿಸಿದವರ ಸಂಖ್ಯೆ 1,35,000ದಷ್ಟಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News