ಬಂಟಕಲ್ಲು ವಿದ್ಯಾರ್ಥಿಗಳಿಂದ ಕೋವಿಡ್ ಕುರಿತ ಆ್ಯಪ್ ಅಭಿವೃದ್ಧಿ
ಶಿರ್ವ, ಮೇ 9: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾ ಲಯದ ವಿದ್ಯಾರ್ಥಿಗಳ ತಂಡಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣಾ ಯೋಜೆಯಡಿಯಲ್ಲಿ ಆರ್ಥಿಕ ಅನುದಾನ ಲಭಿಸಿದೆ.
ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ತಾಂತ್ರಿಕ ಪರಿಹಾರಗಳನ್ನು ಒದಗಿಸುವ ನೂತನ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಇತ್ತೀಚೆಗೆ ನೀಡಿದ ಕರೆಗೆ ಪ್ರತಿಕ್ರಿಯೆಯಾಗಿ ಸಂಸ್ಥೆಯ ಎರಡನೆ ವರ್ಷದ ವಿದ್ಯಾರ್ಥಿ ಸೂರಜ್ ನೇತೃತ್ವದಲ್ಲಿ ದೀಪಕ್ ನಾಯಕ್, ಉಲ್ಲಾಸ್, ಸೌರಭ್ ಶೆಟ್ಟಿ, ಅಭಿಜಿತ್, ಹಿತ್ಯೇಶ್ ಆಚಾರ್, ಪ್ರಿಂಸ್ಟನ್ ಲೂಯಿಸ್ ಮೊಬೈಲ್ ಆ್ಯಪ್ ಅಭಿವೃದ್ಧಿಗೊಳಿಸುವ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.
ಈ ಆ್ಯಪನ್ನು ಭಾರತ ಸರಕಾರದ ಆರೋಗ್ಯ ಸೇತು ಮಾದರಿಯಲ್ಲಿ ರಚಿಸಲಾಗುತ್ತಿದೆ. ಕೋವಿಡ್ ಸೋಂಕಿನ ಇತ್ತೀಚಿನ ಅಂಕಿ ಅಂಶಗಳು, ಈ ರೋಗದ ಬಗೆಗಿರುವ ಮಿಥ್ಯೆ-ತಥ್ಯೆಗಳು, ಸೋಂಕಿನ ಬಗ್ಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ, ಪ್ರಶ್ನಾವಳಿಗಳ ಮೂಲಕ ಸ್ವ ಆರೋಗ್ಯ ಪರೀಕ್ಷೆ, ಹತ್ತಿರದಲ್ಲಿರುವ ಕೋವಿಡ್ ತಪಾಸಣಾ ಮತ್ತು ಚಿಕಿತ್ಸಾ ಕೇಂದ್ರಗಳ ಸಂಪರ್ಕ ಮಾಹಿತಿ ಇತ್ಯಾದಿ ವೈಶಿಷ್ಟ್ಯಗಳನ್ನು ಈ ಆ್ಯಪ್ ಹೊಂದಿದೆ.
ಕೊರೊನ ಕಾರಣದಿಂದ ಹೇರಲ್ಪಟ್ಟಿರುವ ನಿರ್ಬಂಧನದ ಅವಧಿಯನ್ನು ಸಂಸ್ಥೆಯ ವಿದ್ಯಾರ್ಥಿಗಳು ಅತ್ಯಂತ ಪ್ರಯೋಗಶೀಲರಾಗಿ, ಸೃಜನಾತ್ಮಕವಾಗಿ ಕಳೆಯುತ್ತಿರುವುದಕ್ಕೆ ಮತ್ತು ಅವರ ಪ್ರಯತ್ನಗಳಿಗೆ ವಿಶ್ವವಿದ್ಯಾಲಯದ ಅನು ದಾನವೂ ಒದಗಿರುವುದಕ್ಕೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಅಭಿನಂದಿಸಿದ್ದಾರೆ.