ಟ್ರಂಪ್ ಪುತ್ರಿ ಇವಾಂಕಾ ಆಪ್ತ ಸಹಾಯಕಿಗೆ ಕೊರೋನ ವೈರಸ್
ವಾಶಿಂಗ್ಟನ್, ಮೇ 9: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪುತ್ರಿ ಇವಾಂಕಾ ಟ್ರಂಪ್‌ರ ಆಪ್ತ ಸಹಾಯಕಿ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಮಾಧ್ಯಮ ವರದಿಯೊಂದು ಶನಿವಾರ ತಿಳಿಸಿದೆ. ಇದರೊಂದಿಗೆ ಆಪ್ತ ಸಹಾಯಕಿಯು ಕೋವಿಡ್-19 ಸೋಂಕಿಗೆ ಒಳಗಾದ ಶ್ವೇತಭವನದ ಮೂರನೇ ಸಿಬ್ಬಂದಿಯಾಗಿದ್ದಾರೆ.
ಅಮೆರಿಕ ಅಧ್ಯಕ್ಷರ ಪುತ್ರಿಯೊಂದಿಗೆ ವೈಯಕ್ತಿಕ ನೆಲೆಯಲ್ಲಿ ಕೆಲಸ ಮಾಡುತ್ತಿರುವ ಆಪ್ತ ಸಹಾಯಕಿಯು ಹಲವು ವಾರಗಳಿಂದ ಅವರ ಸಮೀಪದಲ್ಲಿ ಕಾಣಿಸಿಕೊಂಡಿಲ್ಲ ಎಂಬುದಾಗಿಯೂ ಸಿಎನ್‌ಎನ್ ವರದಿ ಮಾಡಿದೆ.
ಅವರು ಎರಡು ತಿಂಗಳಿಂದ ದೂರದಿಂದಲೇ ಕೆಲಸ ಮಾಡುತ್ತಿದ್ದಾರೆ ಹಾಗೂ ಮುನ್ನೆಚ್ಚರಿಕೆಯ ಕ್ರಮವಾಗಿ ಅವರನ್ನು ತಪಾಸಣೆಗೊಳಪಡಿಸಲಾಯಿತು ಎಂದು ವರದಿ ಹೇಳಿದೆ.
ಸಹಾಯಕಿಯಲ್ಲಿ ಯಾವುದೇ ರೋಗ ಲಕ್ಷಣಗಳು ಗೋಚರಿಸಿರಲಿಲ್ಲ. ಇವಾಂಕಾ ಮತ್ತು ಗಂಡ ಜ್ಯಾರೆಡ್ ಕಶ್ನರ್‌ರನ್ನು ಶುಕ್ರವಾರ ತಪಾಸಣೆಗೊಳಪಡಿಸಲಾಗಿದ್ದು, ಇಬ್ಬರಲ್ಲಿಯೂ ಸೋಂಕು ಕಂಡುಬಂದಿಲ್ಲ.
ಉಪಾಧ್ಯಕ್ಷರ ವಕ್ತಾರೆಗೂ ಕೊರೋನ ಸೋಂಕು
ಇದಕ್ಕೂ ಒಂದು ದಿನ ಮೊದಲು, ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ರ ವಕ್ತಾರೆ ಕ್ಯಾಟೀ ಮಿಲ್ಲರ್ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಅವರು ಈ ಸಾಂಕ್ರಾಮಿಕದ ಸೋಂಕಿಗೆ ಒಳಗಾದ ಶ್ವೇತಭವನದ ಎರಡನೇ ಸಿಬ್ಬಂದಿಯಾಗಿದ್ದಾರೆ.
ಗುರುವಾರ ಟ್ರಂಪ್ ಏರ್ಪಡಿಸಿದ ಹೊರಾಂಗಣ ಪ್ರಾರ್ಥನಾ ಕೂಟದಲ್ಲಿ ಕ್ಯಾಟೀ ಮಿಲ್ಲರ್ ಅಮೆರಿಕದ ಹಿರಿಯ ಅಧಿಕಾರಿಗಳೊಂದಿಗೆ ಮುಖಾಮುಖಿಯಾಗಿದ್ದರು.