ಮಂಗಳೂರಿನಿಂದ ರೈಲಿನಿಂದ ತವರಿಗೆ ಹೊರಟ ಜಾರ್ಖಂಡ್ ನ ವಲಸೆ ಕಾರ್ಮಿಕರು
ಮಂಗಳೂರು, ಮೇ 9: ಕೊರೋನ ವೈರಸ್ ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ವಿವಿಧ ಕಡೆ ಬಾಕಿಯಾಗಿದ್ದ ಜಾರ್ಖಂಡ್ ಮೂಲದ ಸುಮಾರು 1200 ವಲಸೆ ಕಾರ್ಮಿಕರು ಶನಿವಾರ ರಾತ್ರಿ ಮಂಗಳೂರು ರೈಲು ನಿಲ್ದಾಣದಿಂದ ಪಯಣ ಬೆಳೆಸಿದರು. ಜಿಲ್ಲಾದ್ಯಂತ 20 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರು ತವರೂರಿಗೆ ಹೋಗಲಾಗದೆ ಅತಂತ್ರರಾಗಿದ್ದರು. ಲಾಕ್‌ಡೌನ್ ಸಡಿಲಿಕೆಯ ಬಳಿಕ ತವರೂರಿಗೆ ಹೋಗಲು ಸಿದ್ಧರಾದ ಕಾರ್ಮಿಕರು ಶುಕ್ರವಾರ ಮಂಗಳೂರು ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರು. ಆದರೆ ರೈಲು ಸಂಚಾರದ ವ್ಯವಸ್ಥೆ ಇಲ್ಲದ ಕಾರಣ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮಧ್ಯೆ ಕಾಂಗ್ರೆಸ್ ಮುಖಂಡರು ಕಾರ್ಮಿಕರ ಪ್ರತಿಭಟನೆಗೆ ಬೆಂಬಲ ನೀಡಿ ಬಿಜೆಪಿ ಸರಕಾರದ ವೈಫಲ್ಯದಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ಆಪಾದಿಸಿದ್ದರು. ಈ ಮಧ್ಯೆ ಉತ್ತರ ಭಾರತ ಸೇರಿದಂತೆ ಹೊರ ರಾಜ್ಯಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ರೈಲು ಪ್ರಯಾಣ ಶನಿವಾರದಿಂದ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದರು.
ಈಗಾಗಲೆ "ಸೇವಾ ಸಿಂಧು" ಆನ್ ಲೈನ್ ಮೂಲಕ ನೋಂದಣಿ ಮಾಡಿರುವ ಕಾರ್ಮಿಕರಿಗೆ ಸೂಕ್ತ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು ಎಲ್ಲರಿಗೂ ಅವರವರ ಮನೆ ವಠಾರದಿಂದ ಕರೆದುಕೊಂಡು ರೈಲು ನಿಲ್ದಾಣಕ್ಕೆ ಬರಲು ವಾಹನದ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಶನಿವಾರ ಜಾರ್ಖಂಡ್ ಮೂಲದ ಕಾರ್ಮಿಕರನ್ನು ರೈಲು ನಿಲ್ದಾಣಕ್ಕೆ ಕರೆತಂದು ಅಗತ್ಯ ಪರೀಕ್ಷೆ ನಡೆಸಿ ಕಳಿಸಿ ಕೊಡಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ರೈಲು ನಿಲ್ದಾಣದಲ್ಲಿ ಕಾರ್ಮಿಕರ ಯೋಗಕ್ಷೇಮ ವಿಚಾರಿಸಿದರು.
ವಲಸೆ ಕಾರ್ಮಿಕರು ಯಾವುದೇ ಕಾರಣಕ್ಕೂ ಸ್ವತಃ ರೈಲು ನಿಲ್ದಾಣ ಕಡೆಗೆ ಬರುವ ಅಗತ್ಯವಿಲ್ಲ. ಅವರಿರುವ ಸ್ಥಳದಿಂದ ವಾಹನದಲ್ಲಿ ಕರೆದುಕೊಂಡು ಬರಲಾಗುವುದು. ಸೇವಾ ಸಿಂಧೂನಲ್ಲಿ ನೋಂದಣಿ ಮಾಡಿರುವ ಕಾರ್ಮಿಕರಿಗೆ "ಮೊದಲು ನೋಂದಣಿ ಮಾಡಿದವರಿಗೆ ಮೊದಲ ಆದ್ಯತೆ" ಎಂಬಂತೆ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಕಾರ್ಮಿಕರು ಪ್ರಯಾಣದ ಸಿದ್ಧತೆಯನ್ನು ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿರಯವ ವಲಸೆ ಕಾರ್ಮಿಕರು ತವರು ಜಿಲ್ಲೆ ಸೇರುವವರೆಗೂ ರೈಲು ಸಂಚಾರ ಮುಂದುವರಿಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.