ಅಯೋಧ್ಯೆ ರಾಮಮಂದಿರಕ್ಕೆ ನೀಡುವ ದೇಣಿಗೆಗಳಿಗೆ ಶೇ.50ರಷ್ಟು ತೆರಿಗೆ ವಿನಾಯಿತಿ
Update: 2020-05-09 22:28 IST
ಹೊಸದಿಲ್ಲಿ, ಮೇ 9: ಅಸಾಧಾರಣ ನಡೆಯೊಂದರಲ್ಲಿ ಕೇಂದ್ರ ಸರಕಾರವು, ಅಯೋಧ್ಯೆಯ ರಾಮದೇವಾಲಯ ನಿರ್ಮಾಣಕ್ಕೆ ನೀಡುವ ದೇಣಿಗೆಗಳಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿದೆ.
ಕೇಂದ್ರ ನೇರ ತೆರಿಗೆ ಮಂಡಳಿಯು ಮೇ 8ರಂದು ಈ ಬಗ್ಗೆ ಅಧಿಸೂಚನೆಯೊಂದನ್ನು ಹೊರಡಿಸಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಜಿಯ ಉಪವಾಕ್ಯ (ಬಿ) ಅನ್ವಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರವನ್ನು ಐತಿಹಾಸಿಕ ಮಹತ್ವದ ಹಾಗೂ ಪ್ರಸಿದ್ಧ ಸಾರ್ವಜನಿಕ ಆರಾಧನಾ ಸ್ಥಳವೆಂದು ವರ್ಗೀಕರಿಸಲಾಗಿದೆ. ಇದರಿಂದಾಗಿ 2020-21ರ ವಿತ್ತೀಯ ವರ್ಷದಲ್ಲಿ ಟ್ರಸ್ಟ್‌ಗೆ ದೇಣಿಗೆ ನೀಡುವವರ ಆದಾಯ ತೆರಿಗೆಯಲ್ಲಿ ಶೇ.50ರವರೆಗೆ ವಿನಾಯಿತಿ ನೀಡಬಹುದಾಗಿದೆ.
15 ಸದಸ್ಯರನ್ನೊಳಗೊಂಡ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ಕೇಂದ್ರ ಸರಕಾರವು ಫೆಬ್ರವರಿ 5ರಂದು ರಚಿಸಿತ್ತು. ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರವನ್ನು ನಿರ್ಮಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದ ಮೂರು ತಿಂಗಳ ಬಳಿಕ ಟ್ರಸ್ಟ್ ರಚನೆಯಾಗಿತ್ತು.