×
Ad

ಮುಂಡಾಜೆಯಲ್ಲಿವ ಮರಳು ದಂಧೆ ವಿರುದ್ದ ಕ್ರಮ ಕೈಗೊಳ್ಳಿ: ವಸಂತ ಬಂಗೇರ ಒತ್ತಾಯ

Update: 2020-05-09 22:50 IST

ಬೆಳ್ತಂಗಡಿ; ಮುಂಡಾಜೆ ಪಂಚಾಯತ್ ವ್ಯಾಪ್ತಿಯ ಮೃತ್ಯುಂಜಯ ನದಿ ಹಳ್ಳದಲ್ಲಿ ರಾತ್ರಿ ವೇಳೆ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇದರಲ್ಲಿ ತಾಲೂಕಿನ ದೊಡ್ಡ ಕುಳಗಳು ಭಾಗಿಯಾಗಿದ್ದು ರಾತ್ರಿ ಬೆಳಗ್ಗಿನವರೆಗೆ ಹಿಟಾಚಿ ಬಳಸಿ ಅಕ್ರಮ ಎಸಗುತ್ತಿದ್ದು ಇದರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳುಬೇಕು ಇಲ್ಲವಾದಲ್ಲಿ ಹೋರಾಟ ನಡೆಸುವುದಾಗಿ ಮಾಜಿ ಶಾಸಕ ಕೆ ವಸಂತ ಬಂಗೇರ ಹಾಗೂ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ ಗೌಡ ಒತ್ತಾಯಿಸಿದ್ದಾರೆ.

ಮುಂಡಾಜೆ ಗ್ರಾ. ಪಂ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ತೋಟಕ್ಕೆ ಬಿದ್ದ ಹೂಳು ತೆಗೆಯಲು ಇರುವ ಪರವಾನಿಗೆಯನ್ನು ಮುಂದಿಟ್ಟುಕೊಂಡು ಈ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಇದರಿಂದಾಗಿ ಪಂಚಾಯತ್ ವ್ಯಾಪ್ತಿಯ ರಸ್ತೆ, ಮೋರಿಗಳಿಗೂ ಹಾನಿಯಾಗಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಗ್ರಾಮಸ್ತರು ಒಟ್ಟು ಸೇರಿ ಇದನ್ನು ತಡೆಯುವ ಕೆಲಸ ಮಾಡಿದ್ದು ಆ ಬಳಿಕವೂ ಈ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇನ್ನೂ ಹೀಗೆ ಮುಂದುವರಿದರೆ ಈ ಪ್ರದೇಶದಲ್ಲಿ ಧರಣಿ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

ನೆರೆಯ ಸಂದರ್ಭ ತೋಟದೊಳಗೆ ನುಗ್ಗಿದ್ದ ಮರಳನ್ನು ತೆರವುಗೊಳಿಸಲು ಹಿಂದೆ ಇದ್ದ ಅನುಮತಿಯನ್ನು ದರ್ಬಳಿಸಿಕೊಂಡು ತಾಲೂಕಿನ ಲೂಟಿಕೋರರು ತಾಲೂಕಿನ ಸಂಪತ್ತನ್ನು ದೋಚುತ್ತಿದ್ದಾರೆ. ಸ್ಥಳಕ್ಕೆ ತಹಶೀಲ್ದಾರರು 2 ಬಾರಿ ಭೇಟಿ ನೀಡಿದ್ದರೂ ದಂಧೆಕೋರರು ತಪ್ಪಿಸಿಕೊಂಡಿದ್ದು ಯಾವುದೇ ಪ್ರಯೋಜನವಾಗಿಲ್ಲ. ಇದೀಗ ನಿನ್ನೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ದಾಳಿ ಮಾಡಿ ಸ್ಥಳದಿಂದ 17 ಲೋಡು ಮರಳು ಮುಟ್ಟುಗೋಲು ಹಾಕಿಕೊಂಡು ಅದನ್ನು ನಿಯಮಾನುಸಾರ ವಿಲೇ ಮಾಡಿದ್ದಾರೆ ಎಂದರು.

ಈ ದಂಧೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಶಾಮೀಲಾತಿ ಎದ್ದುಕಾಣುತ್ತಿದ್ದು, ಇದೇ ರೀತಿ ತಾಲೂಕಿನ ಇತರ ಕಡೆಗಳಲ್ಲೂ ಕೂಡ ದಂಧೆ ನಡೆಯುತ್ತಿದೆ.  ಇದರ ಹಿಂದೆ ತಾಲೂಕಿನ ದೊಡ್ಡ ಜಾಲವೇ ಇದ್ದು ಕೂಡಲೇ ಈ ಬಗ್ಗೆ ಹಮನ ಹರಿಸುವಂತೆ ಒತ್ತಾಯಿಸಿದರು. ಮನವಿ ನೀಡಿದ ಸಂದರ್ಭದಲ್ಲಿ.ಮುಂಡಾಜೆ ಗ್ರಾ.ಪಂ ಅಧ್ಯಕ್ಷೆ ಶಾಲಿನಿ, ಸದಸ್ಯರಾದ ನಾರಾಯಣ ಗೌಡ ದೇವಸ್ಯ, ಸುಮನಾ ಗೋಖಲೆ, ಮಾಜಿ ಸದಸ್ಯ ನಾಗರಾಜ ನಾಯ್ಕ, ಪ್ರಮುಖರಾದ ರಾಮಆಚಾರಿ ಮತ್ತು ನಾಮದೇವ ರಾವ್, ಗುರುರಾಜ್, ರಂಜನ್ ಇದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News