ಸುಲಗ್ನ ಸಾವಧಾನ: ಮೂಡುಬಿದಿರೆಯಲ್ಲಿ ಲಾಕ್ ಡೌನ್ ನಡುವೆ ಮನೆಯಲ್ಲೇ ಸರಳ ವಿವಾಹ

Update: 2020-05-10 08:07 GMT

ಮೂಡುಬಿದಿರೆ, ಮೇ.10: ಕೊರೋನ ವೈರಸ್ ತಡೆಯಲು ದೇಶಾದ್ಯಂತ ಲಾಕ್ ಡೌನ್ ವಿಧಿಸಲಾಗಿದ್ದು, ಈ ನಡುವೆ ಮೂಡುಬಿದಿರೆ ತಾಲೂಕಿನ ತೆಂಕಮಿಜಾರು ಗ್ರಾಮದಲ್ಲಿ ಸರಳ ರೀತಿಯಲ್ಲಿ ಮನೆಯಲ್ಲಿಯೇ ಮದುವೆ ಕಾರ್ಯಕ್ರಮವೊಂದು ನಡೆಯಿತು. ಅನುಷಾ- ಶ್ರೀಧರ್ ಎಂಬವರು ಇಂದು ತೀರಾ ಹತ್ತಿರದ ಬಂಧುಗಳ ಉಪಸ್ಥಿತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 

ಅನುಷಾ- ಶ್ರೀಧರ್ ಅವರ ವಿವಾಹ ಕಾರ್ಯಕ್ರಮವು ಮೇ.10ಕ್ಕೆ ನಿಗದಿಯಾಗಿತ್ತು. ಎಲ್ಲವೂ ಸುಸೂತ್ರ ನಡೆಯುತ್ತಿದ್ದರೆ ಇಂದು ಕಲ್ಯಾಣ ಮಂಟಪದಲ್ಲಿ ಸಾವಿರಾರು ಬಂಧುಮಿತ್ರರ ಉಪಸ್ಥಿತಿಯಲ್ಲಿ ಮದುವೆ ನಡೆಯಬೇಕಿತ್ತು. ಕಲ್ಯಾಣ ಮಂಟಪ, ವಾದ್ಯ, ಡೆಕೋರೇಷನ್, ಆಮಂತ್ರಣ.. ಹೀಗೆ ಎಲ್ಲವೂ ಸಿದ್ಧವಾಗಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಮದುವೆಯು ಕಲ್ಯಾಣ ಮಂಟಪದಲ್ಲಿ ನಡೆಯಲಿಲ್ಲ. ಸಾವಿರಾರು ಬಂಧುಮಿತ್ರರೂ ಇರಲಿಲ್ಲ. ಬದಲಾಗಿ ಮನೆಯೇ ಕಲ್ಯಾಣ ಮಂಟಪವಾಗಿ ಬಿಟ್ಟಿತು. ಸುಮಾರು ಹದಿನಾರು ತೀರಾ ಹತ್ತಿರದ ಬಂಧುಗಳ ಉಪಸ್ಥಿತಿಯಲ್ಲಿ ವಿವಾಹ ನಡೆಯಿತು.

ಮದುವೆ ಕಾರ್ಯಕ್ರಮದಲ್ಲಿ ಸುರಕ್ಷಿತ ಅಂತರ ಪಾಲಿಸಿ, ಮಾಸ್ಕ್ ಧರಿಸಿ ಸಂಬಂಧಿಕರು ಸರಕಾರದ ಆದೇಶವನ್ನು ಪಾಲಿಸಿದರು. ಅಲ್ಲದೇ, ಕಾರ್ಯಕ್ರಮಗಳನ್ನು ಆನ್ ಲೈನ್ ನಲ್ಲಿ ಲೈವ್ ನೋಡಲು ಎಲ್ಲ ಸಂಬಂಧಿಕರಿಗೂ ಅನುಕೂಲ ಮಾಡಿಕೊಡಲಾಗಿತ್ತು. ಸಂಬಂಧಿಕರೆಲ್ಲರೂ ಅವರವರ ಮನೆಯಲ್ಲಿಯೇ ಕುಳಿತು ಮದುವೆಯನ್ನು ವೀಕ್ಷಿಸಿ ವಧು-ವರರನ್ನು ಹಾರೈಸಿದರೆ, ನವ ದಂಪತಿಗಳು ಮಾಸ್ಕ್ ಧರಿಸಿ Stay home, stay healthy ಎನ್ನುವ ಫಲಕಗಳನ್ನು ಮಂಟಪದಲ್ಲಿ ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಿದರು.

Writer - ರಾಜೇಂದ್ರ ಪೈ

contributor

Editor - ರಾಜೇಂದ್ರ ಪೈ

contributor

Similar News