ಗಂಗೊಳ್ಳಿ ಸಮುದ್ರ ಮಧ್ಯೆ ದೋಣಿಯಲ್ಲಿ ತಾಂತ್ರಿಕ ದೋಷ: ನಾಲ್ವರು ಮೀನುಗಾರರ ರಕ್ಷಣೆ

Update: 2020-05-10 11:39 GMT

ಗಂಗೊಳ್ಳಿ, ಮೇ 10: ಗಂಗೊಳ್ಳಿ ಬಂದರಿನಿಂದ ಒಂದು ನಾಟೇಕಲ್ ದೂರದ ಸಮುದ್ರ ಮಧ್ಯೆ ಬೃಹತ್ ಬಂಡೆ ಕಲ್ಲುಗಳ ಸಮೀಪ ತಾಂತ್ರಿಕ ತೊಂದರೆ ಯಿಂದ ಸಿಲುಕಿಕೊಂಡಿದ್ದ ಮೀನುಗಾರಿಕಾ ದೋಣಿ ಮತ್ತು ಅದರಲ್ಲಿದ್ದ ನಾಲ್ವರು ಮೀನುಗಾರರನ್ನು ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಪೊಲೀಸರು ರಕ್ಷಣೆ ಮಾಡಿರುವ ಘಟನೆ ರವಿವಾರ ಬೆಳಗ್ಗೆ 7.15ರ ಸುಮಾರಿಗೆ ನಡೆದಿದೆ.

ದಿನೇಶ್ ಖಾರ್ವಿ ಮಾಲಕತ್ವದ ಮರ್ಲಿ ಚಿಕ್ಕು ಎಂಬ ಹೆಸರಿನ ಮೀನು ಗಾರಿಕಾ ದೋಣಿಯು ಬೆಳಗಿನ ಜಾವ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆ ತೆರಳಿದ್ದು, ಅಲ್ಲಿಂದ ಸುಮಾರು ಒಂದು ನಾಟೇಕಲ್ ದೂರದ ಸಮುದ್ರ ಮಧ್ಯೆ ದೋಣಿಯ ಇಂಜಿನ್‌ನಲ್ಲಿ ತಾಂತ್ರಿಕ ತೊಂದರೆ ಕಂಡುಬಂತು. ಇದರಿಂದ ದೋಣಿ ಅಲ್ಲೇ ನಿಂತು, ಬಳಿಕ ಎರಡು ಬೃಹತ್ ಬಂಡೆ ಕಲ್ಲುಗಳ ಮಧ್ಯೆ ಸಿಕ್ಕಿ ಹಾಕಿಕೊಂಡಿತ್ತೆನ್ನಲಾಗಿದೆ. ಈ ಸಂದರ್ಭ ಅದರಲ್ಲಿದ್ದ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್. ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ, ಇಲಾಖಾ ಇಂಟರ್‌ಸೆಪ್ಟರ್ ಬೋಟಿನಲ್ಲಿ ಸ್ಥಳಕ್ಕೆ ತೆರಳಿತು.ಸಮುದ್ರದ ಮಧ್ಯದಲ್ಲಿ ಸಿಕ್ಕಿಕೊಂಡಿದ್ದ ದೋಣಿ ಹಾಗೂ ಅದರಲ್ಲಿದ್ದ ಗಂಗೊಳ್ಳಿ ಖಾರ್ವಿಕೇರಿ ನಿವಾಸಿಗಳಾದ ಮಣಿಕಂಠ ಖಾರ್ವಿ(22), ನಾಗಪ್ಪ ಖಾರ್ವಿ (50), ಪಾಂಡುರಂಗ ಖಾರ್ವಿ(40) ಹಾಗೂ ಬೇಲಿಕೇರಿ ನಿವಾಸಿ ಸಂತೋಷ್ ಖಾರ್ವಿ(40) ಅವರನ್ನು ರಕ್ಷಿಸಿ ದಡಕ್ಕೆ ಕರೆ ತರಲಾಯಿತು.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಗಂಗೊಳ್ಳಿ ಠಾಣಾ ಸಿಬ್ಬಂದಿ ಗುರು ರಾಜ್, ಪ್ರಸಾದ್ ಶೆಟ್ಟಿ, ಬೋಟಿನ ಕ್ಯಾಪ್ಟನ್ ದೀಪಕ್ ಕುಮಾರ್, ಕಲಾಸಿ ಶೈಲೇಶ್ ಕುಮಾರ್ ಪಾಲ್ಗೊಂಡಿದ್ದರು. ಈ ತಂಡಕ್ಕೆ ಸಿಎಸ್‌ಪಿ ಪೊಲೀಸ್ ಅಧೀಕ್ಷಕು ಬಹುಮಾನವನ್ನು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News