ಹೊರರಾಜ್ಯದ 2,280 ವಲಸೆ ಕಾರ್ಮಿಕರು ವಿಶೇಷ ರೈಲಿನಲ್ಲಿ ಹುಟ್ಟೂರಿಗೆ ಪ್ರಯಾಣ
ಮಂಗಳೂರು, ಮೇ 10: ಕೊರೋನ-ಲಾಕ್‌ಡೌನ್‌ನಿಂದಾಗಿ ಕಳೆದ ಒಂದುವರೆ ತಿಂಗಳಿನಿಂದ ಅತಂತ್ರ ಸ್ಥಿತಿಯಲ್ಲಿ ದ.ಕ.ಜಿಲ್ಲೆಯಲ್ಲೇ ಬಾಕಿಯಾಗಿದ್ದ ವಲಸೆ ಕಾರ್ಮಿಕರನ್ನು ತವರೂರಿಗೆ ಕಳುಹಿಸಿಕೊಡುವ ಪ್ರಕ್ರಿಯೆ ರವಿವಾರವೂ ನಡೆದಿದೆ. ಸೇವಾ ಸಿಂಧು ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡ 1200ಕ್ಕೂ ಅಧಿಕ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರು ಶನಿವಾರ ಮಂಗಳೂರಿನಿಂದ ಹೊರಟಿದ್ದರೆ, ರವಿವಾರ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಕ್ಕೆ ಸೇರಿದ ತಲಾ 1,140 ಮಂದಿ ವಲಸೆ ಕಾರ್ಮಿಕರು ನಗರದ ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಎರಡು ವಿಶೇಷ ರೈಲಿನಲ್ಲಿ ಹುಟ್ಟೂರಿಗೆ ಪ್ರಯಾಣ ಬೆಳೆಸಿದರು.
ನಗರದ ವಿವಿಧ ಕಡೆಗಳಿಂದ ರವಿವಾರ ಬೆಳಗ್ಗೆ ವಲಸೆ ಕಾರ್ಮಿಕರು ಗುಂಪಾಗಿ ನಗರದ ಸ್ಟೇಟ್‌ಬ್ಯಾಂಕ್, ಸೆಂಟ್ರಲ್ ರೈಲ್ವೆ ಸ್ಟೇಶನ್, ಹಂಪನಕಟ್ಟೆ ಪ್ರದೇಶಕ್ಕೆ ಆಗಮಿಸಿದರು. ಆದರೆ ಎಲ್ಲಿಂದ, ಎಷ್ಟು ಹೊತ್ತಿಗೆ ರೈಲು ಎಂಬ ಮಾಹಿತಿ ಇರಲಿಲ್ಲ. ತೊಕ್ಕೊಟ್ಟು, ತಲಪಾಡಿ ಹಾಗೂ ಉಳ್ಳಾಲ ಭಾಗದಿಂದಲೂ ವಲಸೆ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ಮಧ್ಯೆ ಸುರಕ್ಷಿತ ಅಂತರ ಕಾಪಾಡದ ಹಿನ್ನೆಲೆಯಲ್ಲಿ ಪೊಲೀಸರು ಕೆಲವು ವಲಸೆ ಕಾರ್ಮಿಕರತ್ತ ಲಾಠಿ ಬೀಸಿದರು ಎಂಬ ದೂರು ಕೇಳಿ ಬಂದಿದೆ.
ಉತ್ತರ ಪ್ರದೇಶದ ಹರ್ದೋಯಿಗೆ ಸೇರಿದ ಈ ವಲಸೆ ಕಾರ್ಮಿಕರು ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ನಗರದಲ್ಲಿ ಜಮಾಯಿಸಿದ್ದರು. ಇವರಲ್ಲಿ ಹೆಚ್ಚಿನವರು ತೊಕ್ಕೊಟ್ಟು ಸಮೀಪದ ಕೆ.ಸಿ.ರೋಡ್, ತಲಪಾಡಿ, ಉಳ್ಳಾಲ ಭಾಗದಿಂದ ಆಟೋ ರಿಕ್ಷಾಕ್ಕೆ 300-400 ರೂ. ಪಾವತಿಸಿ ಬಂದಿದ್ದರು ಎನ್ನಲಾಗಿದೆ. ಈ ವಲಸೆ ಕಾರ್ಮಿಕರಲ್ಲಿ ಶೇ. 10ರಷ್ಟು ಮಹಿಳೆಯರು ಕೂಡ ಇದ್ದರು.
ಉತ್ತರ ಪ್ರದೇಶದ ಕಾರ್ಮಿಕರನ್ನು ಜಿಲ್ಲೆಯ ಬೇರೆ ಬೇರ ಕಡೆಯಿಂದ ರೈಲು ನಿಲ್ದಾಣಕ್ಕೆ ಕರೆತರಲು ಬರಲು 23 ಬಸ್ಸುಗಳ ವ್ಯವಸ್ಥೆ ಮಾಡಲಾ ಗಿತ್ತು. ಪ್ರತೀ ಬಸ್ಸಿಗೆ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯನ್ನು ಮೇಲ್ವಿಚಾರಕರಾಗಿ ನೇಮಿಸಿ, ಅವರಿಗೆ ಒಬ್ಬರು ಗ್ರಾಮಕರಣಿಕರು ಹಾಗೂ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿತ್ತು.
ಬಸ್ಸು ಹತ್ತುವ ಮೊದಲೇ ಅವರ ಎಲ್ಲಾ ವಿವರ ಸಂಗ್ರಹಿಸಿ, ನಂತರ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ಇದಕ್ಕಾಗಿ ಸುಸಜ್ಜಿತ ಆರೋಗ್ಯ ತಂಡವನ್ನು ನಿಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮೇಲ್ವಿಚಾರಣೆಯಲ್ಲಿ ನಡೆದ ಈ ಸಂಚಾರ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳು ರವಿವಾರ ಬೆಳಗ್ಗೆ 7 ಗಂಟೆಯಿಂದಲೇ ಕರ್ತವ್ಯದಲ್ಲಿ ತೊಡಗಿದ್ದರು.
ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಸೇರಿದ ತಲಾ 1,140 ಮಂದಿ ವಲಸೆ ಕಾರ್ಮಿಕರನ್ನು ರವಿವಾರ ಮಂಗಳೂರು (ಕಂಕನಾಡಿ) ಜಂಕ್ಷನ್ ರೈಲ್ವೆ ನಿಲ್ದಾಣದಿಂದ ವಿಶೇಷ ರೈಲಿನಲ್ಲಿ ಕಳುಹಿಸಿ ಕೊಡಲಾಗಿದೆ ಎಂದು ಕಾರ್ಮಿಕ ಇಲಾಖೆಯ ಆಯುಕ್ತ ನಾಗರಾಜ ತಿಳಿಸಿದ್ದಾರೆ.