ವಲಸೆ ಕಾರ್ಮಿಕರ ಪ್ರಯಾಣದಲ್ಲಿ ನಿಯಮಗಳ ಉಲ್ಲಂಘನೆ : ಡಿವೈಎಫ್‌ಐ ಆರೋಪ
ಮಂಗಳೂರು, ಮೇ 10: ವಲಸೆ ಕಾರ್ಮಿಕರನ್ನು ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ತಲುಪಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲೆಯಲಿ ಕಲ್ಪಿಸಲಾದ ಪ್ರಯಾಣ ವ್ಯವಸ್ಥೆಯಲ್ಲಿ ಕೊರೋನ ವೈರಸ್ ತಡೆಯುವ ಸಲುವಾಗಿ ಅಳವಡಿಸಿಕೊಳ್ಳಲಾದ ಸೇವಾ ಸಿಂಧು ನಿಯಮವನ್ನು ಉಲ್ಲಂಘಿಸಲಾಗಿದೆ. ಇದು ಕೊರೋನ ವೈರಸ್ ನಿಯಂತ್ರಣದ ಕ್ರಮಗಳ ಮೇಲೆ ಹಾನಿ ಉಂಟು ಮಾಡುತ್ತದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಹೊರ ರಾಜ್ಯಗಳಿಗೆ ತೆರಳುವ ಕಾರ್ಮಿಕರು ಸೇವಾ ಸಿಂಧುವಿನಲ್ಲಿ ಹೆಸರು ನೊಂದಾಯಿಸಿಕೊಳ್ಳುವುದು ಕಡ್ಡಾಯ. ಇದು ಆಯಾಯ ರಾಜ್ಯ ಗಳನ್ನು ಪ್ರವೇಶಿಸುವ ಕಾರ್ಮಿಕರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಸ್ಥಳೀಯ ಆಡಳಿತಗಳಿಗೆ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ. ಈ ರೀತಿ ನೋಂದಣಿಗೊಂಡ ಕಾರ್ಮಿಕರನ್ನು ಆನ್‌ಲೈನ್ ಸರದಿಯಲ್ಲಿ ತವರು ರಾಜ್ಯಗಳಿಗೆ ಕಳುಹಿಸಿ ಕೊಡಲಾಗುತ್ತದೆ. ಆದರೆ ಸತತ 2 ದಿನ ಮಂಗಳೂರಿನಿಂದ ಜಾರ್ಖಂಡ್ ಹಾಗೂ ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ಹೊರಟ ರೈಲು ಪ್ರಯಾಣದಲ್ಲಿ ಈ ನಿಯಮಗಳನ್ನು ಪೂರ್ಣವಾಗಿ ಉಲ್ಲಂಘಿಸಲಾಗಿದೆ. ಸೇವಾ ಸಿಂಧುವಿನಲ್ಲಿ ಹೆಸರು ನೊಂದಾಯಿಸಲ್ಪಟ್ಟ ಸರದಿಗಳನ್ನು ಕಡೆಗಣಿಸಿ ಪ್ರದೇಶಗಳಲ್ಲಿ ಇರುವ ಕಾರ್ಮಿಕ ವಸತಿಯ ಗುಂಪುಗಳನ್ನು ಕರೊದೊಯ್ಯಲಾಗಿದೆ ಎಂದು ಆರೋಪಿಸಿದ್ದಾರೆ.
ಬಿಹಾರಕ್ಕೆ ತೆರಳಬೇಕಾದ ನಗರದ ಹಲವು ಕಡೆಗಳ ಕಾರ್ಮಿಕರು ಸೇವಾ ಸಿಂಧುವಿನಲ್ಲಿ ಹೆಸರು ನೋಂದಾಯಿಸಿ ರವಿವಾರ ಹೊರಡಲಿರುವ ರೈಲಿನಲ್ಲಿ ಪ್ರಯಾಣಕ್ಕಾಗಿ ಕಾಯುತ್ತಿದ್ದರು. ಆದರೆ ಜಿಲ್ಲಾಡಳಿತ ಎಂಆರ್‌ಪಿಎಲ್ ಒತ್ತಾಯಕ್ಕೆ ಮಣಿದು ಜೋಕಟ್ಟೆ ಸುತ್ತಮುತ್ತಲಿದ್ದ ಬಿಹಾರ ಮೂಲದ ಕಾರ್ಮಿಕರನ್ನು ಮಾತ್ರ ತಲಾ ಸಾವಿರದ ಮುನ್ನೂರು ರೂ. ಶುಲ್ಕ ಪಡೆದು, ಸುರಕ್ಷಿತ ಅಂತರ ಪಾಲಿಸದೆ ಬಸ್ಸುಗಳಲ್ಲಿ ತುಂಬಿಸಿ ಕೊಂಡು ರೈಲು ನಿಲ್ದಾಣಕ್ಕೆ ಸಾಗಿಸಿದೆ. ಈ ಸಂದರ್ಭ ಸರಿಯಾದ ರೀತಿಯ ಆರೋಗ್ಯ ತಪಾಸಣೆ ನಡೆಸಲಾಗಿಲ್ಲ, ಆಹಾರಗಳನ್ನು ಒದಗಿಸಿಲ್ಲ, ಪೊಲೀಸ್ ಇಲಾಖೆ ಹೊರತುಪಡಿಸಿ ಸಂಬಂಧ ಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿರಲಿಲ್ಲ. ಈ ರೀತಿಯ ಸಾಗಾಟದಿಂದ ಆಯಾಯ ರಾಜ್ಯಗಳಿಗೆ, ರಾಜ್ಯದೊಳಗಡೆ ಪ್ರವೇಶಿಸಿದ ವ್ಯಕ್ತಿಗಳ ನಿಖರ ಮಾಹಿತಿ ದೊರಕದೆ ನಿಗಾ ಇಡುವುದು, ಕ್ವಾರಂಟೈನ್ ಮಾಡುವುದು ಕಷ್ಟಕರವಾಗಲಿದೆ. ಇದು ಕೊರೋನ ಸೋಂಕು ನಿಯಂತ್ರಣ ಕ್ರಮಗಳಿಗೂ ಹಾನಿ ಉಂಟುಮಾಡಲಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ರಾಜ್ಯ ಸರಕಾರ ತಕ್ಷಣ ಇಂತಹ ಲೋಪಗಳತ್ತ ಗಮನ ಹರಿಸಬೇಕು. ಕಾರ್ಮಿಕರಿಂದ ದುಬಾರಿ ಶುಲ್ಕ ಸಂಗ್ರಹ ಮಾಡುವುದನ್ನು ಕೈ ಬಿಟ್ಟು ಕೇಂದ್ರ ಸರಕಾರವೇ ಪ್ರಯಾಣ ವೆಚ್ಚ ಭರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.