×
Ad

ಭೂಸ್ವಾಧೀನ: ಮನೆಬಾಗಿಲಿಗೆ ಪರಿಹಾರ ತಲುಪಿಸಿದ ಕೆಐಎಡಿಬಿ

Update: 2020-05-10 21:57 IST

ಮಂಗಳೂರು ಮೇ 10: ಸರಕಾರದ ವಿವಿಧ ಯೋಜನೆಗಳಿಗೆ, ಕೈಗಾರಿಕೆಗಳ ಸ್ಥಾಪನೆಗೆ ಭೂಸ್ವಾಧೀನ ಪ್ರಮುಖವಾಗಿದೆ. ಇದಕ್ಕಾಗಿ ಜಮೀನು ಗುರುತಿಸಿ, ಅಧಿಸೂಚನೆ ಹೊರಡಿಸಿ, ಆಕ್ಷೇಪಣೆಗಳನ್ನು ಪರಿಗಣಿಸಿ, ಅಂತಿಮ ಅಧಿಸೂಚನೆಯಾದ ನಂತರ ಜಮೀನು ಕಳೆದುಕೊಂಡವರಿಗೆ ಪರಿಹಾರ ಮೊತ್ತ ನೀಡುವುದು ಪ್ರಮುಖ ಘಟ್ಟವಾಗಿದೆ. ಹಲವು ಸಂದರ್ಭಗಳಲ್ಲಿ ಸಂತ್ರಸ್ತರು ಪರಿಹಾರಕ್ಕಾಗಿ ವರ್ಷಗಟ್ಟಲೆ ಕಚೇರಿಗಳಿಗೆ ಸುತ್ತಾಡಿ, ನ್ಯಾಯಾಲಯದ ಮೊರೆ ಹೋಗಿ ಹತ್ತಾರು ವರ್ಷಗಳ ವಿಳಂಭವಾಗಿ ಪರಿಹಾರ ದೊರಕುವ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗುತ್ತಿವೆ.

ಆದರೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮಂಗಳೂರು ಕಚೇರಿಯು ಭೂಸ್ವಾಧೀನದಿಂದ ಜಮೀನು ಕಳೆದುಕೊಂಡ ನಿರ್ವಸಿ ತರಿಗೆ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ನೇರವಾಗಿ ಅವರ ಮನೆಬಾಗಿಲಿಗೆ ತೆರಳಿ ಪರಿಹಾರ ಮೊತ್ತವನ್ನು ನೀಡುವ ಮೂಲಕ ಈ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿದೆ. ಎಂಆರ್‌ಪಿಎಲ್ 4ನೇ ಹಂತದ ವಿಸ್ತರಣೆ ಯೋಜನೆಗಾಗಿ ಮಂಗಳೂರು ತಾಲೂಕಿನ ಪೆರ್ಮುದೆ, ಕುತ್ತೆತ್ತೂರು, ತೋಕೂರು ಗ್ರಾಮಗಳ 962 ಎಕರೆ ಜಮೀನನ್ನು ಕೆಐಎಡಿಬಿ ಸ್ವಾಧೀನಪಡಿಸಿದೆ. ಈ ಜಮೀನು ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದರೂ ಕೂಡ ಜನರು ಪರಿಹಾರ ಪಡೆದುಕೊಳ್ಳುವುದು ಬಾಕಿ ಇತ್ತು. ಇದಕ್ಕಾಗಿ ನಿರ್ವಸಿತರು ಬೈಕಂಪಾಡಿ ಕೆಐಎಡಿಬಿ ಕಚೇರಿಗೆ ಆಗಮಿಸಬೇಕಿತ್ತು.

ಈ ಮಧ್ಯೆ ಕೋವಿಡ್-ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರು ಕೆಐಎಡಿಬಿ ಕಚೇರಿಗೆ ಆಗಮಿಸುವುದು ದುಸ್ತರವಾಗಿ ಕಳೆದ ಒಂದೂವರೆ ತಿಂಗಳಿನಿಂದ ಈ ಪರಿಹಾರ ವಿತರಣೆ ಪ್ರಕ್ರಿಯೆ ನೆನಗುದಿಗೆ ಬಿತ್ತು. ಅದರಲ್ಲೂ ಬಹುತೇಕ ಜಮೀನುಗಳ ದಾಖಲೆಗಳು ಕುಟುಂಬದ ಹಿರಿಯ ನಾಗರಿಕರ ಹೆಸರಿ ನಲ್ಲಿರುವುದರಿಂದ ಪರಿಹಾರ ಪಡೆದುಕೊಳ್ಳಲು ಖುದ್ದು ಅವರೇ ಬರಬೇಕಾಗಿತ್ತು. ಕೊರೋನ ಭೀತಿ, ಲಾಕ್‌ಡೌನ್‌ನಿಂದ ವಾಹನ ಸಂಚಾರ ನಿರ್ಬಂಧ, ಅನಾರೋಗ್ಯ ಮೊದಲಾದ ಸಮಸ್ಯೆಗಳಿಂದ ಬೈಕಂಪಾಡಿಯಲ್ಲಿರುವ ಕೆಐಎಡಿಬಿ ಕಚೇರಿಗೆ ತೆರಳು ಪರಿಹಾರ ಪಡೆದುಕೊಳ್ಳುವುದು ಅಸಾಧ್ಯವಾಗಿತ್ತು.

ಸಂತ್ರಸ್ತರ ಈ ಕಷ್ಟ ಅರ್ಥೈಸಿಕೊಂಡ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಬಿನೊಯ್ ಪಿ.ಕೆ. ಮನೆಯಿಂದ ಹೊರಗೆ ಬರಲು ಕಷ್ಟವಿರುವ ಹಿರಿಯ ನಾಗರಿಕರು ಹಾಗೂ ಅನಾರೋಗ್ಯವುಳ್ಳ ಅರ್ಹ ಸಂತ್ರಸ್ತರ ಪಟ್ಟಿಯನ್ನು ತಯಾರಿಸಿ ಅಧಿಕಾರಿ-ಸಿಬ್ಬಂದಿಯನ್ನೊಳಗೊಂಡ ತಂಡವೇ ಸಂತ್ರಸ್ತರ ಮನೆಗಳಿಗೆ ತೆರಳಿ, ಅಲ್ಲಿಯೇ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ, ನಿಗದಿತ ಪರಿಹಾರದ ಮೊತ್ತವನ್ನೂ ನೀಡಿ ಗಮನ ಸೆಳೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News