ಯುದ್ಧನೌಕೆಯಲ್ಲಿ ಬಂದ ಕೆಲ ಗಂಟೆಗಳಲ್ಲೇ ಗಂಡುಮಗುವಿಗೆ ಜನ್ಮ ನೀಡಿದ ಕೇರಳ ನರ್ಸ್

Update: 2020-05-11 05:08 GMT

ಕೊಚ್ಚಿನ್ : ಮಾಲ್ಡೀವ್ಸ್‌ನಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯರನ್ನು ಸ್ವದೇಶಕ್ಕೆ ಕರೆ ತರುವ ಕಾರ್ಯಾಚರಣೆಯಡಿ ಐಎನ್‌ಎಸ್ ಜಲಾಶ್ವ ಯುದ್ಧನೌಕೆಯಲ್ಲಿ ಆಗಮಿಸಿದ ಕೆಲವೇ ಗಂಟೆಗಳಲ್ಲಿ ಕೇರಳ ಮೂಲದ ನರ್ಸ್ ಒಬ್ಬರು ಗಂಡುಮಗುವಿಗೆ ಜನ್ಮ ನೀಡಿದ ಸ್ವಾರಸ್ಯಕರ ಪ್ರಸಂಗ ವರದಿಯಾಗಿದೆ.

ಸೋನಿಯಾ ಜಾಕೋಬ್ ಮಾಲ್ಡೀವ್ಸ್ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋನಿಯಾ ಸೇರಿದಂತೆ 19 ಮಂದಿ ಗರ್ಭಿಣಿಯರನ್ನು ಭಾರತದ ಯುದ್ಧನೌಕೆಯಲ್ಲಿ ಕೇರಳದ ಕೊಚ್ಚಿನ್ ಬಂದರಿಗೆ ರವಿವಾರ ಬೆಳಗ್ಗೆ 9.30ರ ವೇಳೆಗೆ ಕರೆ ತರಲಾಗಿತ್ತು.

ಜಾಕೋಬ್ ಅವರಿಗೆ ಈ ಮುನ್ನ ಆರು ಬಾರಿ ಗರ್ಭಪಾತವಾಗಿತ್ತು. ಅವರು ಮತ್ತೆ ಗರ್ಭಿಣಿಯಾಗಿದ್ದರಿಂದ ಆದ್ಯತೆ ಮೇರೆಗೆ ಅವರನ್ನು ಸ್ವದೇಶಕ್ಕೆ ವಾಪಾಸು ಕಳುಹಿಸಲಾಗಿತ್ತು. ಕೊಚ್ಚಿ ಬಂದರಿನಲ್ಲಿ ಇಮಿಗ್ರೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ತಕ್ಷಣ, ಅವರಿಗೆ ಅಸ್ವಸ್ಥತೆ ಕಂಡುಬಂತು. ತಕ್ಷಣ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ, ಬಳಿಕ ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಸಿಸೇರಿಯನ್ ಬಳಿಕ ಸಂಜೆ 5.40ರ ವೇಳೆಗೆ ಜಾಕೋಬ್ ಖಾಸಗಿ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದರು. ಅವರ ಪತಿ ಶೈನಿ ಕೇರಳದಲ್ಲಿ ನರ್ಸ್ ಆಗಿದ್ದಾರೆ. ಆರು ವರ್ಷ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ ಇದು ಮೊದಲ ಮಗು. ಕೋವಿಡ್-19 ಸಂಬಂಧಿ ಪ್ರಯಾಣ ನಿರ್ಬಂಧದಿಂದಾಗಿ ಮಾಲ್ಡೀವ್ಸ್‌ನಲ್ಲಿ ಸಿಕ್ಕಿಹಾಕಿಕೊಂಡ 698 ಮಂದಿ ಭಾರತೀಯರನ್ನು ಐಎನ್‌ಎಸ್ ಜಲಾಶ್ವದಲ್ಲಿ ಕರೆ ತರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News