×
Ad

ಎಫ್ ಐ ಆರ್ ದಾಖಲಾದ ಬೆನ್ನಿಗೇ ಜಿಹಾದ್ ಅಂದರೆ ಹಾಗಲ್ಲ, ಹೀಗೆ ಎಂದು ವಿವರಿಸಿದ ಸುಧೀರ್ ಚೌಧರಿ !

Update: 2020-05-11 11:11 IST
ಸುಧೀರ್ ಚೌಧರಿ

ಹೊಸದಿಲ್ಲಿ : ಝೀ ನ್ಯೂಸ್ ಮುಖ್ಯ ಸಂಪಾದಕ ಹಾಗೂ ಆ್ಯಂಕರ್ ಸುಧೀರ್ ಚೌಧುರಿ ವಿರುದ್ಧ 'ಇಸ್ಲಾಂ ಧರ್ಮವನ್ನು ಅವಹೇಳನಗೈದಿದ್ದಕ್ಕಾಗಿ'  ಕೇರಳ ಸರಕಾರ ಎಫ್‍ಐಆರ್ ದಾಖಲಿಸಿದ ನಂತರ ಚೌಧುರಿ 'ಜಿಹಾದ್' ವಿಚಾರವನ್ನೇ ತಮ್ಮ ಶೋ ನಲ್ಲಿ ಮತ್ತೆ ಕೈಗೆತ್ತಿಕೊಂಡಿದ್ದಾರೆ. ಆದರೆ ಈ ಬಾರಿ ಅವರ ಶೋ ಮುಖ್ಯ ಉದ್ದೇಶ 'ಜಿಹಾದ್' ಎಂಬ ಇಸ್ಲಾಮಿಕ್ ಮೂಲದ ಪದದ 'ಮುಖ್ಯ ಉದ್ದೇಶವನ್ನು' ವಿವರಿಸುವುದಾಗಿತ್ತು.

ಶುಕ್ರವಾರದ ತಮ್ಮ ಕಾರ್ಯಕ್ರಮದಲ್ಲಿ ಸುಧೀರ್ ಚೌಧುರಿ, ಇಸ್ಲಾಂ ಧರ್ಮದ ಐದು ಆಧಾರಸ್ಥಂಭಗಳನ್ನು ವಿವರಿಸಿದರಲ್ಲದೆ 'ಜಿಹಾದ್' ಎಂಬ ಪದದ ಅರ್ಥ `ಧರ್ಮನಿಷ್ಠ ಹೋರಾಟ' ಎಂದು ಹೇಳಿದ್ದಾರೆ. ತಮ್ಮ ಕಾರ್ಯಕ್ರಮದುದ್ದಕ್ಕೂ ಚೌಧುರಿ  ಯಾವುದೇ ನಿಂದನಾತ್ಮಕ ಹೇಳಿಕೆಗಳನ್ನು ನೀಡುವ ಗೋಜಿಗೆ ಹೋಗದೆ ಗೌರವಯುತವಾಗಿಯೇ ಇಸ್ಲಾಂ ಧರ್ಮದ ಬಗ್ಗೆ ಮಾತನಾಡಿದ್ದಾರೆ.

''ಜಿಹಾದ್ ಪದದ ಅರ್ಥವನ್ನು ಯಾವತ್ತೂ ನಮ್ಮ ಮುಂದೆ ತಪ್ಪಾದ ರೀತಿಯಲ್ಲಿಯೇ ಪ್ರಸ್ತುತಪಡಿಸಲಾಗಿದೆ,'' ಎಂದು ಸುಧೀರ್ ಚೌಧುರಿ ಹೇಳಿದರು. ''ಜಗತ್ತಿನಾದ್ಯಂತ ಉಗ್ರರು  ಹಿಂಸೆ ಹಾಗೂ ಭೀತಿಯನ್ನು ಪಸರಿಸಿ ತಮ್ಮನ್ನು ಜಿಹಾದಿಗಳು ಎಂದು ಕರೆಸಿಕೊಳ್ಳುತ್ತಾರೆ. ತೀವ್ರಗಾಮಿಗಳು ಕೂಡ ತಮ್ಮ ತಮ್ಮ ಕೃತ್ಯಗಳನ್ನು ಸಮರ್ಥಿಸಿ ತಮ್ಮನ್ನು ಜಿಹಾದಿಗಳೆಂದು ಕರೆಸಿಕೊಳ್ಳುತ್ತಾರೆ'' ಎಂದು  ಹೇಳಿದ ಚೌಧುರಿ 'ಜಿಹಾದ್' ಎಂದು ಕರೆಸಿಕೊಳ್ಳಲು ಯೋಗ್ಯವಲ್ಲದ ಕೃತ್ಯಗಳ ಪಟ್ಟಿಯನ್ನು ಓದಿದರು.

ಮಾರ್ಚ್ 20ರಂದು ಪ್ರಸಾರಗೊಂಡ ಕಾರ್ಯಕ್ರಮದಲ್ಲಿ ಚೌಧುರಿ ಚಿತ್ರವೊಂದನ್ನು ಬಳಸಿ ''ಮುಸ್ಲಿಮರು ಹಿಂದುಗಳ ವಿರುದ್ಧ  ಜಿಹಾದ್ ನಡೆಸುವ ವಿಧಗಳ'' ಬಗ್ಗೆ ವಿವರಿಸಿದ್ದರು. ''ಕಠಿಣ'' ಮತ್ತು ''ಮೃದು'' ಜಿಹಾದ್ ಇದೆಯೆಂದೂ ಅವರು ಹೇಳಿಕೊಂಡಿದ್ದರು. ಮೊದಲ ವಿಭಾಗದಲ್ಲಿ ''ಜನಸಂಖ್ಯಾ ಜಿಹಾದ್'' ಲವ್ ಜಿಹಾದ್ ಹಾಗೂ ಜಮೀನು ಜಿಹಾದ್'' ಒಳಗೊಂಡಿದೆ ಎಂದು ಹೇಳಿದ ಅವರು ಮೃದು ಜಿಹಾದ್‍ನಲ್ಲಿ ''ಆರ್ಥಿಕ ಜಿಹಾದ್,  ಇತಿಹಾಸ ಜಿಹಾದ್ ಹಾಗೂ ಮಾಧ್ಯಮ ಜಿಹಾದ್'' ಒಳಗೊಂಡಿದೆ ಎಂದಿದ್ದರು.

ಆದರೆ ಇದನ್ನು ವಿವರಿಸಲು ಅವರು ಬಳಸಿದ್ದ ಚಾರ್ಟ್ ಅನ್ನು ಫೇಸ್ ಬುಕ್ ಪುಟವೊಂದರಿಂದ ನಕಲು ಮಾಡಲಾಗಿತ್ತು ಎಂದು ನ್ಯೂಸ್ ಲಾಂಡ್ರಿ ವರದಿ ಮಾಡಿತ್ತು.

ಈ ನಿರ್ದಿಷ್ಟ ಕಾರ್ಯಕ್ರಮದ ವಿರುದ್ಧ ಕೇರಳ ಸರಕಾರ ಎಫ್‍ಐಆರ್ ದಾಖಲಿಸಿದ್ದ ಬೆನ್ನಿಗೆ ಟ್ವೀಟ್ ಮಾಡಿದ್ದ ಚೌಧುರಿ, ''ಸತ್ಯವನ್ನು ವರದಿ ಮಾಡಿದ್ದಕ್ಕಾಗಿ ಇದು ತಮಗೆ ದೊರೆತ ಪುಲಿಟ್ಝರ್ ಪ್ರಶಸ್ತಿ,'' ಎಂದು ಬರೆದಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News