×
Ad

ದ.ಕ.ದಲ್ಲಿನ ಕೊರೋನ ಮೂಲ ಪತ್ತೆಯಲ್ಲಿ ಜಿಲ್ಲಾಡಳಿತ ವಿಫಲ: ಐವನ್ ಡಿಸೋಜಾ

Update: 2020-05-11 14:21 IST

ಮಂಗಳೂರು, ಮೇ 11: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ಹರಡಿರುವ ಕುರಿತಂತೆ ಮೂಲಪತ್ತೆ ಹಚ್ಚುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಜಿಲ್ಲಾಡಳಿತ ವಿಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ‌ಡಿಸೋಜಾ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಆರೋಪ ಮಾಡಿದ ಅವರು, ಉಸ್ತುವಾರಿ ಸಚಿವರೇ ನಾಳೆಯೊಳಗೆ ಮೂಲ ಪತ್ತೆಹಚ್ಚದಿದ್ದರೆ ಕ್ರಮ ಕೈಗೊಳ್ಳುವುದಾಗಿ ಹೇಳುವ ಮೂಲಕ ಗಂಭೀರವಾದ ವಿಚಾರದ ಕುರಿತಂತೆ ಜಿಲ್ಲಾಡಳಿತದ ನಿರ್ಲಕ್ಷ ಹಾಗೂ ವೈಫಲ್ಯವನ್ನು ತೋರ್ಪಡಿಸಿದೆ ಎಂದರು.

ದ.ಕ.ಜಿಲ್ಲೆಯಲ್ಲಿ ಸೋಂಕು ವ್ಯಾಪಿಸಿದ ಕುರಿತಂತೆ ನಗರದ ಖಾಸಗಿ ಆಸ್ಪತ್ರೆ, ಕಾಸರಗೋಡು ಸಂಪರ್ಕ, ತಬ್ಲೀಗಿ ನಂಟು, ವಿದೇಶ ಮೂಲ ಎನ್ನಲಾಗುತ್ತಿದೆ. ಆದರೆ ಮೂಲವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ನಡುವೆ ಉಸ್ತುವಾರಿ ಸಚಿವರ ಹೇಳಿಕೆಯು ಈ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳ ಕೈವಾಡದ ಅನುವಾನವನ್ನು ಹುಟ್ಟು ಹಾಕಿದೆ ಎಂದರು.

ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿ ರಾಜ್ಯದಿಂದ ಜಿಲ್ಲೆಗೆ ಯಾವ ಹೊಸ ಸೌಲಭ್ಯಗಳು ದೊರಕಿದೆ ಎಂಬ ಮಾಹಿತಿ ಇಲ್ಲ. ಮಾಸ್ಕ್, ಸ್ಯಾನಿಟೈಸರ್, ಅಲ್ಲದೆ ವೆಂಟಿಲೇಟರ್ ಕೂಡಾ ಹೊಸತಾಗಿ ವ್ಯವಸ್ಥೆಯಾಗಿಲ್ಲ. ಇತ್ತೀಚೆಗೆ ಇನ್‌ಫೋಸಿಸ್‌ನವರು ನೀಡಿರುವ ಎರಡು ವೆಂಟಿಲೇಟರ್ ಅಳವಡಿಸಿರುವ ಬಗ್ಗೆಯೂ ಅನುಮಾನವಿದೆ. ಈ ನಡುವೆ ವೆನ್ಲಾಕನ್ನು ಕೋವಿಡ್ ಆಸ್ಪತ್ರೆ ಯನ್ನಾಗಿಸಿದರೂ ಅದನ್ನು ಮೇಲ್ದರ್ಜೆಗೇರಿಸಲಾಗಿಲ್ಲ. ಮುಂದಿನ ಸಮಸ್ಯೆಗಳಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಲ್ಲಿ ಸಂಸದರು, ಉಸ್ತುವಾರಿ ಸಚಿವರು ಹಾಗೂ ಶಾಸಕರು ಸೇರಿ ನಿರ್ಲಕ್ಷ್ಯ  ವಹಿಸಿದ್ದಾರೆ ಎಂದು ಅವರು ದೂರಿದರು.

ಸಂಸದ ನಳಿನ್ ಕುಮಾರ್ ಇತ್ತೀಚೆಗೆ ತಮ್ಮ ತಪ್ಪನ್ನು ಮುಚ್ಚಿಹಾಕಲು ಜಿಲ್ಲೆಯಲ್ಲಿ ಕೊರೋನ ಜಾಸ್ತಿಯಾದರೆ ಕಾಂಗ್ರೆಸ್ ಹೊಣೆ ಎಂಬ ಹೇಳಿಕೆ ನೀಡಿದ್ದಾರೆ. ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವಲ್ಲಿಯೂ ಶಾಸಕರ ನಡುವೆ ಸ್ಪರ್ಧೆ ನಡೆಯು ತ್ತಿದೆ. ಆದರೆ ಕೆಲವೆಡೆ ಕಾರ್ಮಿಕರ ಸಂಕಷ್ಟಗಳನ್ನು ಕೇಳುವವರಿಲ್ಲವಾಗಿದೆ. ಬಸ್ಸು, ರೈಲಿನ ವ್ಯವಸ್ಥೆಗಾಗಿ ಕಂಗೆಟ್ಟ ವಲಸೆ ಕಾರ್ಮಿಕರನ್ನು ನಾವು ಮಾನವೀಯತೆ ನೆಲೆಯಲ್ಲಿ ಮಾತನಾಡಿಸಿದ್ದೇವೆ. ಲಾಠಿ ಹಿಡಿದು ಅವರನ್ನು ಓಡಿಸಲೆತ್ನಿಸಿದಾಗ ನಾವು ಹೋಗಿ ಧೈರ್ಯ ಹೇಳಿದ್ದೇವೆ. ಆದರೆ ಜಿಲ್ಲಾಡಳಿತದಲ್ಲಿ ನಿರ್ದಿಷ್ಟವಾದ ಯೋಜನೆ, ಆಲೋಚನೆ, ಸಂವಹನವಿಲ್ಲ. ಜಿಲ್ಲಾಧಿಕಾರಿ ಕರ್ತವ್ಯಕ್ಕೆ ಮಧ್ಯ ಪ್ರವೇಶ ಮಾಡಲಾಗುತ್ತಿದೆ ಎಂದು ಅವರು ದೂರಿದರು.

15 ದಿನಗಳ ಹಿಂದೆ ಶಾಸಕರ ಸಭೆಯಲ್ಲಿ ವಲಸೆ ಕಾರ್ಮಿಕರನ್ನು ಕಳುಹಿಸಲು ರೈಲು ಪಟ್ಟಿ ಮಾಡಲಾಗಿತ್ತು. ಆದರೆ ಕಾಣದ ಕೈಗಳು ವಲಸೆ ಕಾರ್ಮಿಕರು ರೈಲು ಟಿಕೆಟ್ ಬುಕ್ ಮಾಡದಂತೆ ಒತ್ತಡ ಹೇರಿ ಅವರನ್ನು ಬೀದಿಗೆ ತಂದಿವೆ. ಈ ನಡುವೆ ಶಾಸಕರು, ಸಂಸದರು ಕಾಂಗ್ರೆಸ್‌ಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ ಎನ್ನುತಾತರೆ. ಆದರೆ ಕೈಗಾರಿಕೆಗಳು ಆಗಿದ್ದು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ. ಹೊರ ರಾಜ್ಯಗಳ ಕಾರ್ಮಿಕರು ಬಿಜೆಪಿ ಅಧಿಯಲ್ಲಿ ಜಿಲ್ಲೆಗೆ ಬಂದಿದ್ದಲ್ಲ ಎಂದರು.

ಗೋಷ್ಠಿಯಲ್ಲಿ ನಾಗೇಂದ್ರ ಕುಮಾರ್, ಸದಾಶಿವ ಉಳ್ಳಾಲ್, ಸಿ.ಎಂ. ಮುಸ್ತಫಾ, ಸಲೀಂ ಮಕ್ಕ, ಮನುರಾಜ್, ನೀರಜ್ ಪಾಲ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಮಿಕರಿಂದ ಹಣ ವಸೂಲಿ

ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಹಣ ಪಡೆಯಲಾಗುತ್ತಿದೆ. ಕೇಂದ್ರ ಸರಕಾರ ಶೇ. 85 ಹಾಗೂ ಉಳಿದ ಶೇ. 15 ಟಿಕೆಟ್ ದರವನ್ನು ರಾಜ್ಯ ಸರಕಾರ ಭರಿಸುವುದಾಗಿ ಹೇಳಿದೆ. ಆದರೆ ಬಿಹಾರದ ವಲಸೆ ಕಾರ್ಮಿಕರಿಂದ ರೈಲು ಟಿಕೆಟ್ ದರ 960 ರೂ. ಹಾಗೂ ರೈಲು ನಿಲ್ದಾಣದವರೆಗೆ ತಲುಪಿಸಲು ಕೆಎಸ್‌ಆರ್‌ಟಿಸಿ ಬಸ್ಸು ದರವಾಗಿ 40 ರೂ. ಪಡೆಯಲಾಗುತ್ತಿದೆ. ರೈಲ್ವೇ ಇಲಾಖೆಯ 150 ಕೋಟಿ ರೂ. ಪ್ರಧಾನ ಮಂತ್ರಿ ನಿಧಿಗೆ ನೀಡಲಾಗಿದೆ. ಹಾಗಿದ್ದರೂ ಕಾರ್ಮಿಕರಿಗೆ ಟಿಕೆಟ್ ಮಾತ್ರ ವಸೂಲು ಮಾಡುತಿರುವುದು ಖಂಡನೀಯ ಎಂದು ಐವನ್ ಡಿಸೋಜಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News