ಉಡುಪಿ: ಸೋಮವಾರ 122 ಮಂದಿಯ ಸ್ಯಾಂಪಲ್ ನೆಗೆಟಿವ್
ಉಡುಪಿ, ಮೇ 11: ನೋವೆಲ್ ಕೊರೋನ ವೈರಸ್ (ಕೋವಿಡ್- 19) ಸೋಂಕಿನ ಪರೀಕ್ಷೆಗಾಗಿ ಕಳುಹಿಸಿದ ಶಂಕಿತರ ಗಂಟಲು ದ್ರವದ ಮಾದರಿಗಳಲ್ಲಿ ಒಟ್ಟು 122 ಮಂದಿಯ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿವೆ. ಬಾಕಿ ಉಳಿದಿರುವ ಮಾದರಿ ಗಳೊಂದಿಗೆ ಇಂದು ಕಳುಹಿಸಿದ 41 ಸೇರಿದಂತೆ ಒಟ್ಟು 151 ಸ್ಯಾಂಪಲ್‌ಗಳ ವರದಿ ಬರಲು ಬಾಕಿ ಇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ರೋಗದ ಗುಣಲಕ್ಷಣವಿರುವ ಇನ್ನೂ 41 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇವುಗಳಲ್ಲಿ ಎಂಟು ತೀವ್ರ ಉಸಿರಾಟ ತೊಂದರೆಯವರು, 12 ಮಂದಿ ಶೀತಜ್ವರದಿಂದ ಬಳಲುವವರು ಹಾಗೂ 21 ಮಂದಿ ಕೊರೋನ ಹಾಟ್‌ಸ್ಪಾಟ್ ನಿಂದ ಬಂದವರ ಸ್ಯಾಂಪಲ್‌ಗಳು ಸೇರಿವೆ ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಸೋಮವಾರ ಸಂಜೆಯವರೆಗೆ ಒಟ್ಟು 1668 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 1517ರ ವರದಿ ಬಂದಿದ್ದು, 1514 ನೆಗೆಟಿವ್ ಆಗಿವೆ. ಜಿಲ್ಲೆಯಲ್ಲಿ ಈವರೆಗೆ ಮೂರು ವರದಿಗಳು ಮಾತ್ರ ಪಾಸಿಟಿವ್ ಆಗಿ ಬಂದಿವೆ.
ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಇಂದು 13 ಮಂದಿ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ ಆರು ಮಂದಿ ತೀವ್ರತರದ ಉಸಿರಾಟ ತೊಂದರೆಗೆ ಹಾಗೂ ಏಳು ಮಂದಿ ಶೀತಜ್ವರದ ಬಾಧೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಖಲಾದವರಲ್ಲಿ 9 ಮಂದಿ ಪುರುಷರು ಹಾಗೂ ನಾಲ್ವರು ಮಹಿಳೆಯರು ಸೇರಿದ್ದಾರೆ. ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 9 ಮಂದಿ ಬಿಡುಗಡೆಗೊಂಡಿದ್ದು, 67 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೆ ವಾರ್ಡಿನಿಂದ ಬಿಡುಗಡೆಗೊಂಡವರ ಸಂಖ್ಯೆ 434ಕ್ಕೇರಿದೆ ಎಂದು ಡಿಎಚ್‌ಓ ತಿಳಿಸಿದರು.
ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ ವಿವಿಧ ಹಿನ್ನೆಲೆಯೊಂದಿಗೆ ರವಿವಾರ ಇನ್ನೂ 38 ಮಂದಿ ಹೊಸದಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4305 ಮಂದಿಯನ್ನು ಕೊರೋನದ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 2842 (ಇಂದು 72) ಮಂದಿ 28 ದಿನಗಳ ನಿಗಾವನ್ನೂ, 3552 (52) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗ ಒಟ್ಟು 670 ಮಂದಿ ಹೋಮ್ ಕ್ವಾರಂಟೈನ್ ಹಾಗೂ 16 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ವಿವರಿಸಿದರು.
23 ಮಂದಿಯ ವರದಿ ನಿರೀಕ್ಷೆ
ಮಂಗಳೂರಿನಲ್ಲಿ ಕೋವಿಡ್‌ಗಾಗಿ ಕುಖ್ಯಾತಿ ಪಡೆದಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಹಾಗೂ ಅಲ್ಲಿ ಪಾಸಿಟಿವ್ ಬಂದವರ ಸಂಪರ್ಕಕ್ಕೆ ಬಂದ ಒಟ್ಟು 17 ಮಂದಿ ಉಡುಪಿ ಜಿಲ್ಲೆಯಲ್ಲಿದ್ದು, ಅವರನ್ನೆಲ್ಲಾ ಗುರುತಿಸಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿ ರಿಸಲಾಗಿದೆ. ಇವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಇನ್ನೂ ಬಂದಿಲ್ಲ ಎಂದು ಡಾ. ಸೂಡ ತಿಳಿಸಿದರು.
ಅದೇ ರೀತಿ ಎಪ್ರಿಲ್ ತಿಂಗಳ ಕೊನೆಯ ವಾರ ತಮಿಳುನಾಡಿನಿಂದ ಸಿಮೆಂಟ್ ಹೇರಿಕೊಂಡು ಕಾರ್ಕಳಕ್ಕೆ ಆಗಮಿಸಿದ ಲಾರಿ ಚಾಲಕ, ಊರಿಗೆ ಮರಳಿದ ಬಳಿಕ ಕೊರೋನ ಸೋಂಕಿಗೆ ಪಾಸಿಟಿವ್ ಆಗಿದ್ದು, ಆತನೊಂದಿಗೆ ಕಾರ್ಕಳದಲ್ಲಿ ಸಂಪರ್ಕಕ್ಕೆ ಬಂದ ಐವರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಇವರ ವರದಿ ಸಹ ಇಂದು ಬಂದಿಲ್ಲ. ಇವರಲ್ಲಿ ಅಂಗಡಿಯ ಮಾಲಕ ಹಾಗೂ ಕೆಲಸದ ಸಿಬ್ಬಂದಿಗಳು ಸೇರಿದ್ದಾರೆ ಎಂದರು.
ಇವರೊಂದಿಗೆ ಉತ್ತರ ಕರ್ನಾಟಕದ ಜಿಲ್ಲೆಗೆ ಹೋಗಿ ಬಂದ ಪಡುಬಿದ್ರಿಯ ವ್ಯಾಪಾರಿಯೊಬ್ಬರಲ್ಲಿ ಜ್ವರ ಕಾಣಿಸಿಕೊಂಡಿದ್ದು, ಅವರಿಗೆ ಸಹ ಕೊರೋನ ಪರೀಕ್ಷೆಗೊಳಪಡಿಸಲಾಗಿದೆ. ಆತನ ವರದಿಯೂ ಇಂದು ಬಂದಿಲ್ಲ ಎಂದು ಡಿಎಚ್‌ಓ ತಿಳಿಸಿದರು.