ತಿನ್ನಲು ಆಹಾರ ಇಲ್ಲದೆ ಕಾಲ್ನಡಿಗೆಯಲ್ಲೇ ಊರಿಗೆ ಹೊರಟ ತೆಲಂಗಾಣ ಕಾರ್ಮಿಕರು !

Update: 2020-05-11 16:19 GMT

ಮಣಿಪಾಲ, ಮೇ 11: ಲಾಕ್‌ಡೌನ್‌ನಿಂದಾಗಿ ಕಳೆದ ಎರಡು ವಾರಗಳಿಂದ ತಿನ್ನಲು ಆಹಾರ ಇಲ್ಲದ ಹಿನ್ನೆಲೆಯಲ್ಲಿ ತಮ್ಮ ಊರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಗರ್ಭಿಣಿ ಸಹಿತ 40 ಮಂದಿ ತೆಲಂಗಾಣದ ಕೂಲಿ ಕಾರ್ಮಿಕರನ್ನು ಪೊಲೀಸರು ಇಂದು ಸಂಜೆ ಮಣಿಪಾಲದಲ್ಲಿ ತಡೆದಿದ್ದು, ಎರಡು ಮೂರು ದಿನಗಳಲ್ಲಿ ಬಸ್ ಮೂಲಕ ಕಳುಹಿಸುವ ಭರವಸೆ ನೀಡಿದ ಬಳಿಕ, ಎಲ್ಲ ಕಾರ್ಮಿಕರು ತಮ್ಮ ಟೆಂಟ್‌ಗಳಿಗೆ ವಾಪಾಸ್ಸಾಗಿದ್ದಾರೆ.

ತೆಲಂಗಾಣ ಮೂಲದ ಸುಮಾರು 48 ಮಂದಿ ಕೂಲಿ ಕಾರ್ಮಿಕರು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಕೂಲಿ ಕೆಲಸ ಮಾಡುತ್ತಿದ್ದು, ಇವರೆಲ್ಲ ರೈಲ್ವೆ ನಿಲ್ದಾಣದ ಸಮೀಪವೇ ಟೆಂಟ್ ಹಾಕಿ ವಾಸ ಮಾಡುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಇವರನ್ನು ಕೂಲಿ ಕೆಲಸಕ್ಕಾಗಿ ಇಲ್ಲಿಗೆ ಕರೆದುಕೊಂಡು ಬಂದಿದ್ದ ಗುತ್ತಿಗೆದಾರ ಸಂಬಳದ ಬದಲು ಊಟ ನೀಡುತ್ತಿದ್ದ ಎನ್ನಲಾಗಿದೆ.
ಆದರೆ ಕಳೆದ ಎರಡು ವಾರಗಳಿಂದ ಊಟ ನೀಡುವುದನ್ನು ನಿಲ್ಲಿಸಿದ್ದ ಗುತ್ತಿಗೆದಾರ ನಾಪತ್ತೆಯಾಗಿದ್ದ. ಗರ್ಭಿಣಿ ಸಹಿತ ಮಹಿಳೆಯರು ಹಾಗೂ ಮಕ್ಕಳಿರುವ ಈ ಕಾರ್ಮಿಕರ ಗುಂಪು ಅನ್ನ, ಆಹಾರ ಇಲ್ಲದೆ ಪರದಾಡುವಂತಾಯಿತು. ಈ ಹಿನ್ನೆಲೆಯಲ್ಲಿ ಇವರಲ್ಲಿ ಕೆಲವು ಕಾರ್ಮಿಕರು 900 ಕಿ.ಮೀ. ದೂರದ ತಮ್ಮ ಊರಿಗೆ ಕಾಲ್ನಡಿಗೆಯಲ್ಲಿಯೇ ಹೊರಟಿದ್ದರು.

ಇವರ ಗುಂಪಿನಲ್ಲಿ ಗರ್ಭಿಣಿ ಸಹಿತ 18 ಮಹಿಳೆಯರು ಹಾಗೂ 12 ಸಣ್ಣ ಪ್ರಾಯದ ಮಕ್ಕಳಿದ್ದರು. ಮಣಿಪಾಲ ಮೂಲಕ ನಡೆದುಕೊಂಡು ಹೋಗುತ್ತಿದ್ದ ಇವರನ್ನು ಪೊಲೀಸರು ಮಣಿಪಾಲದಲ್ಲಿ ಗಮನಿಸಿ, ವಿಚಾರಿಸಿದರು. ಬಳಿಕ ಸ್ಥಳಕ್ಕೆ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಸಹಿತ ಇತರ ಅಧಿಕಾರಿ ಗಳು ಆಗಮಿಸಿದರು. ಸ್ಥಳೀಯ ನಗರಸಭೆ ಸದಸ್ಯರು, ವಿದ್ಯಾರ್ಥಿ ಗಳು, ಪೊಲೀಸರು ಸ್ಥಳದಲ್ಲಿ ಜಮಾಯಿಸಿ, ಕಾರ್ಮಿಕರನ್ನು ಮನವೊಲಿಸುವ ಕೆಲಸ ಮಾಡಿದರು.

ಆದರೆ ಕೂಲಿಕಾರ್ಮಿಕರು ತಾವು ತಮ್ಮ ಊರಿಗೆ ಹೋಗುವುದಾಗಿ ಪಟ್ಟು ಹಿಡಿದರು. ಯಾರ ಮಾತು ಕೇಳಲು ಸಿದ್ಧರಿಲ್ಲದ ಕಾರ್ಮಿಕರು, ಊರಿಗೆ ಹೋಗಲು ಅವಕಾಶ ನೀಡಿ ಎಂದು ಅಂಗಲಾಚಿದರು. ಬಳಿಕ ತಹಶೀಲ್ದಾರ್ ಇವರಿಗೆ ಸೇವಾಸಿಂಧು ಮೂಲಕ ಪಾಸ್ ವ್ಯವಸ್ಥೆ ಒದಗಿಸಿ ಬಸ್ ಮೂಲಕ ಕಳುಹಿಸುವ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಕೂಲಿ ಕಾರ್ಮಿಕರು ಇಂದ್ರಾಳಿಯಲ್ಲಿರುವ ತಮ್ಮ ಟೆಂಟ್‌ಗೆ ವಾಪಾಸ್ಸಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರಿಗೆ ಬೇಕಾದ ಪಡಿತರ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್, ನಗರಸಭೆ ಸದಸ್ಯ ಮಂಜುನಾಥ್ ಮಣಿಪಾಲ, ಮಾಜಿ ಸದಸ್ಯ ಮಹೇಶ್ ಠಾಕೂರು ಹಾಜರಿದ್ದರು.

ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ಮುಖಂಡರಾದ ಸುಂದರ್ ಮಾಸ್ತರ್, ಶ್ಯಾಮ್‌ರಾಜ್ ಬಿರ್ತಿ, ಭಾಸ್ಕರ್ ಮಾಸ್ಟರ್, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಪ್ರೊ.ಫಣಿರಾಜ್ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ತೆರಳಿ, ಕೂಲಿ ಕಾರ್ಮಿಕ ರನ್ನು ವಿಚಾರಿಸಿದ್ದು, ಅವರನ್ನು ಕೂಡಲೇ ಊರಿಗೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

‘ತೆಲಂಗಾಣದ ಕೂಲಿ ಕಾರ್ಮಿಕರನ್ನು ನಡೆದುಕೊಂಡು ಊರಿಗೆ ಹೋಗ ದಂತೆ ಮನವೊಲಿಸಿ ವಾಪಾಸ್ಸು ಕಳುಹಿಸಿದ್ದೇವೆ. ಇವರಿಗೆ ಬೇಕಾದ ಪಡಿತರ ವನ್ನು ಕೂಡ ನೀಡಲಾಗಿದೆ. ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ ಎರಡು ಮೂರು ದಿನಗಳಲ್ಲಿ ಪಾಸ್ ಒದಗಿಸಲಾಗುವುದು. ಬಳಿಕ ಬಸ್ ವ್ಯವಸ್ಥೆ ಮಾಡಿ ತೆಲಂಗಾಣಕ್ಕೆ ಕಳುಹಿಸಿಕೊಡಲಾಗುವುದು. ಈ ಮಧ್ಯೆ ತೆಲಂಗಾಣದಿಂದಲೇ ಅನುಮತಿ ಪಡೆದು ಬಸ್ ಇಲ್ಲಿಗೆ ಬರುವುದಾಗಿ ಕಾರ್ಮಿಕರು ತಿಳಿಸಿದ್ದಾರೆ. ಅದನ್ನು ಕೂಡ ಪರಿಶೀಲನೆ ಮಾಡುತ್ತೇನೆ’

-ಪ್ರದೀಪ್ ಕುರ್ಡೆಕರ್, ತಹಶೀಲ್ದಾರ್, ಉಡುಪಿ.

‘ಲಾಕ್‌ಡೌನ್ ನಂತರ ನಮ್ಮನ್ನು ಕರೆದುಕೊಂಡು ಬಂದಿದ್ದ ಗುತ್ತಿಗೆದಾರರ ಊಟ ನೀಡುತ್ತಿದ್ದನು. ಆದರೆ ನಮಗೆ ಯಾವುದೇ ಸಂಬಳ ನೀಡುತ್ತಿರಲಿಲ್ಲ. ಆದರೆ ಕಳೆದ ಎರಡು ವಾರಗಳಿಂದ ಗುತ್ತಿಗೆದಾರ ಊಟ ನೀಡುವುದನ್ನು ನಿಲ್ಲಿಸಿದ್ದಾನೆ. ಇದರಿಂದ ನಾವೆಲ್ಲ ಊಟ ಇಲ್ಲದೆ ಪರದಾಡುವಂತಾಗಿದೆ. ಆದುದರಿಂದ ನಮ್ಮ ಊರಿಗೆ ಹೋಗಿ ಬದುಕಿಕೊಳ್ಳುತ್ತೇವೆ ಎಂಬ ಉದ್ದೇಶದಿಂದ ಯಾವುದೇ ವ್ಯವಸ್ಥೆ ಇಲ್ಲದಿದ್ದರೂ ಕಾಲ್ನಡಿಗೆಯಲ್ಲಿಯೇ ಹೊರಟಿದ್ದೇವೆ’
-ಕೂಲಿ ಕಾರ್ಮಿಕ, ತೆಲಂಗಾಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News