ಬಿಆರ್‌ಎಸ್ ಕಂಪೆನಿಯ ವಾಣಿಜ್ಯ ಉದ್ದೇಶ ಬಯಲು: ರಘುಪತಿ ಭಟ್
ಉಡುಪಿ, ಮೇ 11: ಉದ್ಯಮಿ ಬಿ.ಆರ್.ಶೆಟ್ಟಿ ಅವರ ಬಿ.ಆರ್.ಎಸ್. ಹೆಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರೈವೆಟ್ ಲಿಮಿಟೆಡ್, ಆರ್ಥಿಕ ಸಮಸ್ಯೆಯಿಂದ ಉಡುಪಿಯ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಿ ಸರಕಾರಕ್ಕೆ ವಾಪಾಸ್ಸು ಬಿಟ್ಟುಕೊಟ್ಟಿದೆ. ಈ ಮೂಲಕ ಇವರು ಈ ಆಸ್ಪತ್ರೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಪಡೆದುಕೊಂಡಿದ್ದಾರೆಯೇ ಹೊರತು ಸೇವೆಗಾಗಿ ಅಲ್ಲ ಎಂಬುದು ಈಗ ಸಾಬೀತಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರಕಾರ ನಮ್ಮ ಎಲ್ಲ ವಿರೋಧದ ಮಧ್ಯೆಯು ಈ ಆಸ್ಪತ್ರೆಯನ್ನು ಬಿ.ಆರ್.ಶೆಟ್ಟಿ ಕಂಪೆನಿಗೆ ನೀಡಿತ್ತು. ಈಗ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿ ಮೇ ತಿಂಗಳಿಂದ ಈ ಆಸ್ಪತ್ರೆಯನ್ನು ಸರಕಾರವೇ ನಡೆಸ ಬೇಕೆಂದು ಹೇಳಿದ್ದಾರೆ. ಆದರೆ ಸರಕಾರ ಈ ವಿಚಾರದಲ್ಲಿ ಬೆಂಬಲ ನೀಡು ತ್ತೇವೆಯೇ ಹೊರತು ಇಡೀ ಆಸ್ಪತ್ರೆ ಬಿಟ್ಟುಕೊಟ್ಟರೆ ಸರಕಾರಕ್ಕೆ ನಡೆಸಲು ಸಾಧ್ಯ ಇಲ್ಲ ಎಂದು ತಿಳಿಸಿದೆ ಎಂದು ಅವರು ಹೇಳಿದರು.
ಅದರಂತೆ ಸರಕಾರದಿಂದ ಎನ್‌ಆರ್‌ಎಚ್‌ಎಂನಲ್ಲಿ ಆರು ತಜ್ಞ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿರುವ ನಾಲ್ಕು ತಜ್ಞ ವೈದ್ಯರ ಪೈಕಿ ಒಬ್ಬರನ್ನು ಇಲ್ಲಿಗೆ ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ. ಈ ಕುರಿತು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಆರೋಗ್ಯ ಸಚಿವರು, ಆರೋಗ್ಯ ಪ್ರಧಾನ ಕಾರ್ಯದರ್ಶಿ ಜೊತೆ ಚರ್ಚೆ ಮಾಡಲಾಗಿದ್ದು, ಇಲ್ಲಿನ 200 ಬೆಡ್‌ಗೆ ಬೇಕಾದ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ತಿಳಿಸಲಾಗಿದೆ. ಆಗ ಮಾತ್ರ ಈ ಆಸ್ಪತ್ರೆಯನ್ನು ನಡೆಸಲು ಸಾಧ್ಯವಾಗಬಹುದು ಎಂದು ಅವರು ತಿಳಿಸಿದರು.
ಈ ಆಸ್ಪತ್ರೆಯನ್ನು ಬಿ.ಆರ್.ಶೆಟ್ಟಿ ಕಂಪೆನಿಯು ಖಾಸಗಿ ಆಸ್ಪತ್ರೆಯ ರೀತಿ ಯಲ್ಲಿ ನಿರ್ಮಿಸಿದೆ. ಇದರಿಂದ ಸಂಪೂರ್ಣ ಸೆಂಟ್ರಲ್ ಎಸಿ ವ್ಯವಸ್ಥೆ ಇರುವುದ ರಿಂದ ತಿಂಗಳಿಗೆ ಎಸಿಗೆ 18ಲಕ್ಷ ರೂ. ಬಿಲ್ ಬರಬಹುದು. ಇದರಿಂದಾಗಿ ಸರಕಾರ ನಡೆಸುವುದು ಕಷ್ಟ ಆಗುತ್ತದೆ. ಆದರೂ ರೋಗಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕಾನೂನು ಬಾಹಿರ ಕಟ್ಟಡ ನಿರ್ಮಾಣಕ್ಕೆ ತಡೆ
ಬಿ.ಆರ್.ಶೆಟ್ಟಿ ಕಂಪೆನಿಯು ಆಸ್ಪತ್ರೆ ಬಿಟ್ಟುಕೊಡಲು, ಸರಕಾರ ನಮಗೆ ಯಾವುದೇ ಸಹಕಾರ ನೀಡುತ್ತಿಲ್ಲ ಎಂಬ ಕಾರಣ ನೀಡಿದೆ. ಈ ಕಂಪೆನಿ ಅಲ್ಲೇ ಪಕ್ಕದಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯನ್ನು ಕಾನೂನು ಬಾಹಿರವಾಗಿ ನಿರ್ಮಿಸಲು ಹೊರಟಿದೆ. ನಗರದಲ್ಲಿ ಮೂರು ನೆಲಮಹಡಿ ನಿರ್ಮಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶ ಇಲ್ಲ. ಅದಕ್ಕೆ ನಾವು ಅನುಮತಿ ನೀಡಿಲ್ಲ. ಅದು ಬಿಟ್ಟು ಬೇರೆ ಯಾವುದೇ ಸಮಸ್ಯೆ ಮಾಡಿಲ್ಲ ಎಂದು ರಘುಪತಿ ಭಟ್ ಸ್ಪಷ್ಟಪಡಿಸಿದ್ದಾರೆ.
ಈಗ ಬಿ.ಆರ್.ಶೆಟ್ಟಿ ವೈಯಕ್ತಿಕ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಆ ವೈಯಕ್ತಿಕ ಸಮಸ್ಯೆಯಿಂದ ಸರಕಾರಿ ಆಸ್ಪತ್ರೆಗೆ ತೊಂದರೆ ಎದುರಾಗಿದೆ. ಈ ಆಸ್ಪತ್ರೆಯನ್ನು ಮುಂದೆ ಕಂಪೆನಿ ನಿರ್ಲಕ್ಷಿಸುವ ಬಗ್ಗೆ ನಾವು ಮೊದಲೇ ಸೂಚನೆ ಯನ್ನು ನೀಡಿದ್ದೇವು. ಈಗ ಅದರ ಪರಿಣಾಮ ಕಂಡುಬಂದಿದೆ. ಆಗ ಈ ಆಸ್ಪತ್ರೆಗೆ ಮಂಜೂರಾತಿ ನೀಡಿದವರು ಮತ್ತು ಕಾನೂನು ಗಾಳಿಗೆ ತೂರಿ, ಹಾಜಿ ಅಬ್ದುಲ್ಲ ಹೆಸರು ಇಡದೆ ಆಸ್ಪತ್ರೆ ನಿರ್ಮಿಸಲು ಅವಕಾಶ ನೀಡಿದವರು ಉತ್ತರ ನೀಡಬೇಕಾಗಿದೆ ಎಂದು ಅವರು ಹೇಳಿದರು.