​ಮಧ್ಯಪ್ರದೇಶ: ಕೋವಿಡ್ ಸೋಂಕಿತರ ಖಾಸಗಿ ಮಾಹಿತಿ ಸೋರಿಕೆ

Update: 2020-05-12 03:51 GMT
(Photo courtesy: Twitter/@fs0c131y)

ಭೋಪಾಲ್ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರೋಗ್ಯಸೇತು ಆ್ಯಪ್ ಸಾರ್ವಜನಿಕರ ಖಾಸಗಿತನಕ್ಕೆ ಧಕ್ಕೆ ಹಾಗೂ ಇದು ನಾಜೂಕಿನ ಕಣ್ಗಾವಲು ವ್ಯವಸ್ಥೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ‌ಗಾಂಧಿ ಆಪಾದಿಸಿದ ಬೆನ್ನಲ್ಲೇ, ಮಧ್ಯಪ್ರದೇಶ ಸರ್ಕಾರ, ಕೋವಿಡ್-19 ರೋಗಿಗಳ ಜಾಡು ಹಿಡಿಯಲು ಅಭಿವೃದ್ಧಿಪಡಿಸಿದ ಮೊಬೈಲ್ ಆಧಾರಿತ ಸಾರ್ಥಕ್ ಆ್ಯಪ್‌ನಿಂದ, ಸಾವಿರಾರು ಮಂದಿಯ ಖಾಸಗಿ ಮಾಹಿತಿ ಸೋರಿಕೆಯಾಗಿದೆ.

ಸೋರಿಕೆಯಾದ ಮಾಹಿತಿಗಳಲ್ಲಿ ಸುಮಾರು 5500 ಮಂದಿಯ ರಿಯಲ್ ಟೈಮ್ ಲೊಕೇಶನ್, ವೈಯಕ್ತಿಕ ವಿವರಗಳು ಸೇರಿವೆ. ಫ್ರಾನ್ಸ್‌ನ ಕಂಪ್ಯೂಟರ್ ಪ್ರೋಗ್ರಾಮರ್ ಈ ದತ್ತಾಂಶ ಸೋರಿಕೆಯಾಗಿರುವುದನ್ನು ಟ್ವೀಟ್‌ನಲ್ಲಿ ಬಹಿರಂಗಪಡಿಸಿದ ಬಳಿಕ ರವಿವಾರ ಇದನ್ನು ತಡೆ ಹಿಡಿಯಲಾಗಿದೆ.

ಮೊಬೈಲ್ ಅಪ್ಲಿಕೇಶನ್‌ನ ಸ್ಕ್ರೀನ್‌ಶಾಟ್ ಶೇರ್ ಮಾಡಿರುವ ಫ್ರಾನ್ಸ್ ಮೂಲದ ಎಲಿಯಟ್ ಆ್ಯಂಡರ್‌ಸನ್ ಎಂಬ ಹ್ಯಾಕರ್, ಸಾಮಾಜಿಕ ಜಾಲತಾಣಗಳಲ್ಲಿ ಈ ಮಾಹಿತಿ ಸೋರಿಕೆಯನ್ನು ಬಹಿರಂಗಪಡಿಸಿದ್ದಾರೆ.

ಕ್ವಾರಂಟೈನ್‌ನಲ್ಲಿಡಲಾದ ವ್ಯಕ್ತಿಗಳ ವಿವರ, ಅವರ ಸಾಧನಗಳ ಐಡಿ, ಹೆಸರು, ಆಪರೇಟಿಂಗ್ ಸಿಸ್ಟಂ ವರ್ಷನ್, ಆ್ಯಪ್ ವರ್ಷನ್ ಕೋಡ್, ಅವರ ತಕ್ಷಣದ ಹಾಗೂ ಕಚೇರಿ ಸ್ಥಳದ ಜಿಪಿಎಸ್ ವಿವರದ ಕೋವಿಡ್-19 ಡ್ಯಾಷ್‌ಬೋರ್ಡನ್ನು ಭಾರತದ ಮಧ್ಯಪ್ರದೇಶ ರಾಜ್ಯದಲ್ಲಿ ಸೃಷ್ಟಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರ 2020ರ ಎಪ್ರಿಲ್ 8ರಂದು ಹೊರಡಿಸಿದ ಸುತ್ತೋಲೆಯಲ್ಲಿ, ಕೋವಿಡ್-19 ಬಾಧಿತರ ಅಥವಾ ಕ್ವಾರಂಟೈನ್‌ನಲ್ಲಿರುವವರ ಗುರುತು ಬಹಿರಂಗಪಡಿಸಬಾರದು ಎಂದು ಸೂಚಿಸಿತ್ತು. ಆರೋಗ್ಯಸೇತು ಆ್ಯಪ್‌ನಲ್ಲಿನ ಮಾಹಿತಿ ಸೋರಿಕೆಯನ್ನೂ ಹ್ಯಾಕರ್ ಬಹಿರಂಗಪಡಿಸಿದ್ದು, ಇದು ಕಣ್ಗಾವಲು ವ್ಯವಸ್ಥೆ ಎಂಬ ರಾಹುಲ್‌ಗಾಂಧಿ ವಾದವನ್ನು ಬೆಂಬಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News