ಭಾರತದಲ್ಲಿ 70 ಸಾವಿರ ದಾಟಿದ ಕೊರೋನ ಸೋಂಕಿತರ ಸಂಖ್ಯೆ

Update: 2020-05-12 04:13 GMT

ಹೊಸದಿಲ್ಲಿ : ಭಾರತದಲ್ಲಿ ಕೊರೋನ ಸೋಂಕು ಪೀಡಿತರ ಸಂಖ್ಯೆ 60 ಸಾವಿರದ ಗಡಿ ದಾಟಿದ ಎರಡೇ ದಿನದಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದ್ದು, ಒಟ್ಟು ಸೋಂಕಿತರ ಸಂಖ್ಯೆ 70 ಸಾವಿರ ದಾಟಿದೆ.

ಮಹಾರಾಷ್ಟ್ರದಲ್ಲಿ ಸತತ ಆರನೇ ದಿನ 1000ಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿದ್ದು, ತಮಿಳುನಾಡಿನಲ್ಲಿ ಗರಿಷ್ಠ ಸಂಖ್ಯೆ ಅಂದರೆ 798 ಪ್ರಕರಣಗಳು ಒಂದೇ ದಿನ ಪತ್ತೆಯಾಗಿವೆ.

ರವಿವಾರ ದೇಶದಲ್ಲಿ ಒಟ್ಟು 4308 ಪ್ರಕರಣಗಳು ವರದಿಯಾಗಿದ್ದರೆ ಸೋಮವಾರ ಈ ಸಂಖ್ಯೆ ಸ್ವಲ್ಪಮಟ್ಟಿಗೆ ಇಳಿದು 3607 ಪ್ರಕರಣ ದಾಖಲಾಗಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ದೇಶದ ಒಟ್ಟು ಸೋಂಕಿತರ ಸಂಖ್ಯೆ 70768. ದೇಶದ ಒಟ್ಟು ಪ್ರಕರಣಗಳ ಮೂರನೇ ಒಂದರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿವೆ.

ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಹಾಗೂ ದೆಹಲಿ ಹೀಗೆ ನಾಲ್ಕು ರಾಜ್ಯಗಳಲ್ಲಿ ದೇಶದ ಒಟ್ಟು ಪ್ರಕರಣಗಳ ಶೇಕಡ 66ರಷ್ಟು ಪ್ರಕರಣಗಳು ದಾಖಲಾಗಿವೆ.

ಗುಜರಾತ್‌ನಲ್ಲಿ 347, ದೆಹಲಿಯಲ್ಲಿ 310 ಪ್ರಕರಣಗಳು ಸೋಮವಾರ ದಾಖಲಾಗಿವೆ. ಮಹಾರಾಷ್ಟ್ರ (1230), ಗುಜರಾತ್ (374), ತಮಿಳುನಾಡು (798), ದೆಹಲಿ (310), ರಾಜಸ್ಥಾನ (174), ಮಧ್ಯಪ್ರದೇಶ (171) ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ರಾಜ್ಯಗಳು. ಉಳಿದಂತೆ ಇತರೆಡೆಗಳಲ್ಲಿ 583 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 868 ಮಂದಿ ಮೃತಪಟ್ಟಿದ್ದಾರೆ. ಗುಜರಾತ್ (513), ತಮಿಳುನಾಡು (53), ದೆಹಲಿ (73), ರಾಜಸ್ಥಾನ (113) ಹಾಗೂ ಮಧ್ಯಪ್ರದೇಶ (221) ಸಾವಿನ ಸಂಖ್ಯೆಯಲ್ಲಿ ನಂತರದ ಸ್ಥಾನಗಳಲ್ಲಿವೆ. ಭಾರತದ ಇತರ ರಾಜ್ಯಗಳಲ್ಲಿ ಒಟ್ಟು 449 ಮಂದಿ ಬಲಿಯಾಗಿದ್ದಾರೆ. ದೇಶದಲ್ಲಿ ಮೃತಪಟ್ಟ ಸೋಂಕಿತರ ಒಟ್ಟು ಸಂಖ್ಯೆ 2290.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News