ಊರಿಗೆ ಹೊರಟಿದ್ದ ತಾಯಿ-ಮಗಳು ಸಹಿತ ನಾಲ್ವರು ವಲಸೆ ಕಾರ್ಮಿಕರು ರಸ್ತೆ ಅಪಘಾತಕ್ಕೆ ಬಲಿ

Update: 2020-05-12 06:22 GMT

  ಅಂಬಾಲ/ರಾಯ್‌ಬರೇಲಿ,ಮೇ 12:ಕೊರೋನ ವೈರಸ್‌ನಿಂದಾಗಿ ಹೇರಲಾಗಿರುವ ಲಾಕ್‌ಡೌನ್‌ನಿಂದಾಗಿ ಸಾವಿರಾರು ಕಿ.ಮೀ.ದೂರದ ತಮ್ಮಹಳ್ಳಿಗೆ ಹೊರಟ ತಾಯಿ-ಮಗಳು ಸಹಿತ ನಾಲ್ವರು ವಲಸೆ ಕಾರ್ಮಿಕರು ಕಳೆದ ರಾತ್ರಿಯಿಂದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ.

ಮಹಿಳೆ ತನ್ನ ಆರು ವರ್ಷದ ಪುತ್ರಿಯೊಂದಿಗೆ ಮಹಾರಾಷ್ಟ್ರದಿಂದ ಉತ್ತರಪ್ರದೇಶದ ಜೌನಾಪುರದತ್ತ ಹೊರಟಿದ್ದರು. ತಾಯಿ-ಮಗಳು ಕಳೆದ ಮೂರು ದಿನಗಳಿಂದ ಆಟೋ ರಿಕ್ಷಾವೊಂದರಲ್ಲಿ 1,300 ಕಿ.ಮೀ. ದೂರ ಪ್ರಯಾಣ ಆರಂಭಿಸಿದ್ದರು. ತಮ್ಮ ಊರು ತಲುಪುವ ಕೆಲವೇ ಕಿ.ಮೀ.ದೂರದಲ್ಲಿ ಉತ್ತರಪ್ರದೇಶದ ಫತೇಪುರದಲ್ಲಿ ಟ್ರಕ್‌ವೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ತಾಯಿ-ಮಗಳು ಸಾವನ್ನಪ್ಪಿದ್ದಾರೆ.

ಮಂಗಳವಾರ ಬೆಳಗ್ಗೆ ಹರ್ಯಾಣದಲ್ಲಿ ವೇಗವಾಗಿ ಸಾಗಿದ ಬಂದ ಕಾರು ಢಿಕ್ಕಿಯಾಗಿ ಬಿಹಾರದ ವಲಸೆ ಕಾರ್ಮಿಕ ಮೃತಪಟ್ಟಿದ್ದು,ಇನ್ನೋರ್ವ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೋರ್ವ ವಲಸಿಗ ಕಾರ್ಮಿಕ ಸೈಕಲ್‌ನಲ್ಲಿ ತನ್ನೂರಿಗೆ ತೆರಳುತ್ತಿದ್ದ ಹಾದಿಯಲ್ಲಿ ರಾಯ್‌ಬರೇಲಿಯಲ್ಲಿ ಕಳೆದ ರಾತ್ರಿ ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆ ಇಬ್ಬರು ವಲಸಿಗ ಕಾರ್ಮಿಕರು ಹರ್ಯಾಣದ ಅಂಬಾಲದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾರೊಂದು ಢಿಕ್ಕಿಯಾದ ರಭಸಕ್ಕೆ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಾರ್ಮಿಕರು ಬಿಹಾರಕ್ಕೆ ನಡೆದುಕೊಂಡು ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕಾರ್ಮಿಕನ ಮೇಲೆ ಹರಿದಿದೆ.ಅಪಘಾತದ ಬಳಿಕ ಚಾಲಕ ನಾಪತ್ತೆಯಾಗಿದ್ದಾನೆ. ಕಾರನ್ನು ಜಪ್ತಿ ಮಾಡಲಾಗಿದೆ.

ರಾಯ್ ಬರೇಲಿಯಲ್ಲಿ ನಡೆದಿದ್ದ ಮತ್ತೊಂದು ಘಟನೆಯಲ್ಲಿ 25ರ ಹರೆಯದ ವಲಸೆ ಕಾರ್ಮಿಕ ಶಿವಕುಮಾರ್ ದಾಸ್ ಪಶ್ಚಿಮ ಉತ್ತರಪ್ರದೇಶದ ಬುಲಂದ್‌ಶಹರ್‌ನಿಂದ ಬಿಹಾರದತ್ತ ಸೈಕಲ್‌ನಲ್ಲಿ ತೆರಳುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದಿದೆ.

ಕಾರು ಬ್ರೇಕ್ ವೈಫಲ್ಯದಿಂದ ನಿಯಂತ್ರಣ ತಪ್ಪಿದ್ದು,ಚಾಲಕ ಗಾಯಗೊಂಡಿದ್ದಾನೆ ಹಾಗೂ ಕಾರು ನಜ್ಜುಗುಜ್ಜಾಗಿದೆ.

ಲಾಕ್‌ಡೌನ್‌ನಿಂದಾಗಿ ಕೆಲಸಕಳೆದುಕೊಂಡಿರುವ ಸಾವಿರಾರು ವಲಸಿಗ ಕಾರ್ಮಿಕರು ಸಾರ್ವಜನಿಕ ಸಾರಿಗೆ ಅಥವಾ ಅಂತರ್‌ರಾಜ್ಯ ಸಂಚಾರಕ್ಕೆ ಸರಕಾರ ನಿಷೇಧ ವಿಧಿಸಿದ್ದರೂ ತಮ್ಮ ಊರನ್ನು ಸೇರುವ ಹಂಬಲದಲ್ಲಿ ಕಾಲ್ನಡಿಗೆ, ಸೈಕಲ್ ಸವಾರಿ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News