ಅಂತರ್ ಜಿಲ್ಲಾ ಓಡಾಟಕ್ಕೆ ಕಂಪೆನಿ ಕೆಲಸಬಿಟ್ಟು ಉಳಿದವರಿಗೆ ಪಾಸ್ ಕಡ್ಡಾಯ: ಉಡುಪಿ ಡಿಸಿ
ಉಡುಪಿ, ಮೇ 12: ಉಡುಪಿ ಮತ್ತು ದ.ಕ. ಜಿಲ್ಲೆಯನ್ನು ರಾಜ್ಯ ಸರಕಾರ ಒಂದೇ ಘಟಕವನ್ನಾಗಿ ಪರಿಗಣಿಸಿ ಆದೇಶ ಹೊರಡಿಸಿರುವುದರಿಂದ ಖಾಸಗಿ ಕಂಪೆನಿ ಮತ್ತು ಸಂಸ್ಥೆಗಳ ಕೆಲಸಕ್ಕಾಗಿ ಜಿಲ್ಲಾಡಳಿತದ ಪಾಸ್ ಇಲ್ಲದೆ, ಕಂಪೆನಿಯ ಐಡಿ ಅಥವಾ ಅನುಮತಿ ಪತ್ರದೊಂದಿಗೆ ಈ ಎರಡು ಜಿಲ್ಲೆಗಳ ಮಧ್ಯೆ ಬೆಳಗ್ಗೆ 7ಗಂಟೆಯಿಂದ ಸಂಜೆ 7ಗಂಟೆಯವರೆಗೆ ಓಡಾಟ ಮಾಡಬಹುದಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಇದೇ ಅನುಮತಿ ಪತ್ರ ಅಥವಾ ಐಡಿ ಇಟ್ಟುಕೊಂಡು ಯಾರು ಕೂಡ ಅನವಶ್ಯಕವಾಗಿ ಓಡಾಟ ಮಾಡಲು ಅವಕಾಶ ಇಲ್ಲ. ಈ ಹಿಂದೆ ತುರ್ತು ಚಿಕಿತ್ಸೆ ಮತ್ತು ಸರಕು ಸಾಗಾಟಕ್ಕೆ ಮಾತ್ರ ಈ ಎರಡು ಜಿಲ್ಲೆಗಳ ಮಧ್ಯೆ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಇದು ಹೊರತು ಪಡಿಸಿ ಉಳಿದ ಎಲ್ಲ ನಿರ್ಬಂಧಗಳು ಮುಂದುವರಿಯುತ್ತದೆ ಎಂದರು.
ಖಾಸಗಿ ಮತ್ತು ಸಂಸ್ಥೆಗಳಿಗೆ ಈ ಎರಡು ಜಿಲ್ಲೆಗಳ ಮಧ್ಯೆ ಓಡಾಡುವವರು ಅವರದ್ದೆ ಸಂಸ್ಥೆಯ ಐಡಿ ಕಾರ್ಡ್ ಇಟ್ಟುಕೊಂಡರೆ ಸಾಕಾಗುತ್ತದೆ. ಅದಕ್ಕಾಗಿ ಯಾರು ಕೂಡ ಜಿಲ್ಲಾಧಿಕಾರಿ ಕಚೇರಿಯಿಂದ ಪಾಸ್ ಪಡೆಯುವ ಅಗತ್ಯ ಇಲ್ಲ. ಉಳಿದವರು ಪಾಸ್ ಗಳನ್ನು ಪಡೆದೆ ಅಂತರ್ ಜಿಲ್ಲೆಗಳ ಮಧ್ಯೆ ಓಡಾಟ ನಡೆಸಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.