ಕಾರ್ಕಳ ಮೂಲದ ಇಬ್ಬರಲ್ಲಿ ಕೊರೋನ ಸೋಂಕು ಪತ್ತೆ
Update: 2020-05-12 13:40 IST
ಉಡುಪಿ, ಮೇ 12: ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಕಳ ಮೂಲದ ತಾಯಿ-ಮಗನಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇಬ್ಬರ ಗಂಟಲು ದ್ರವದ ಪರೀಕ್ಷೆ ಪಾಸಿಟಿವ್ ಫಲಿತಾಂಶವನ್ನು ನೀಡಿದೆ. 50 ವರ್ಷ ಪ್ರಾಯದ ತಾಯಿ ಹಾಗೂ 26 ವರ್ಷ ಪ್ರಾಯದ ಮಗ ಕಳೆದ ಎ. 20ರಂದು ಚಿಕಿತ್ಸೆಗೆಂದು ಮಂಗಳೂರಿನ ಫಸ್ಟ್ ನ್ಯುರೋ ಆಸ್ಪತ್ರೆಗೆ ತೆರಳಿದ್ದರು. ಲಾಕ್‌ಡೌನ್ ಕಾರಣದಿಂದ ಆ ಬಳಿಕ ಅವರು ಕಾರ್ಕಳಕ್ಕೆ ಮರಳಿ ಬಂದಿಲ್ಲ. ಹೀಗಾಗಿ ಇಲ್ಲಿ ಅವರಿಗೆ ಯಾರೂ ಸಂಪರ್ಕಕ್ಕೆ ಬಂದ ಮಾಹಿತಿ ಇಲ್ಲ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಳೆದ ಎ. 27ರಂದು ಕೊರೋನ ಪಾಸಿಟಿವ್ ಆದ ಮಂಗಳೂರಿನ 80 ವರ್ಷ ಪ್ರಾಯದ ವೃದ್ಧೆಯ ಸಂಪರ್ಕಕ್ಕೆ ಬಂದ ಇವರಿಬ್ಬರಲ್ಲಿ ಇದೀಗ ಕೊರೋನ ಸೋಂಕು ಕಂಡುಬಂದಿದೆ. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಡಾ.ಸೂಡ ತಿಳಿಸಿದರು.