ಉಡುಪಿ ನಗರದಿಂದ ಡಿಸಿ ಕಚೇರಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ
ಉಡುಪಿ, ಮೇ 12: ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಡುಪಿ ನಗರದಿಂದ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಇಂದಿನಿಂದ ಆರಂಭಿಸಲಾಗಿದೆ.
ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಹಿತ ವಿವಿಧ ಇಲಾಖೆಗಳ ಕಚೇರಿಗಳು ಮತ್ತು ಸಮೀಪದಲ್ಲಿರುವ ಆರ್‌ಟಿಓ ಕಚೇರಿಗಳಿಗೆ ಸ್ವಂತ ವಾಹನ ವ್ಯವಸ್ಥೆ ಇಲ್ಲದ ಸಾರ್ವಜನಿಕರಿಗೆ ತೆರಳಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈ ವ್ಯವಸ್ಥೆ ಕಲ್ಪಿಸಿದ್ದಾರೆ.
ಸದ್ಯ ಒಂದು ಕೆಎಸ್‌ಆರ್‌ಟಿಸಿ ಬಸ್ ಮಾತ್ರ ಸಂಚಾರ ಆರಂಭಿಸಿದ್ದು, ಬೆಳಗ್ಗೆ 9ಗಂಟೆಯಿಂದ ಸಂಜೆ 6.30ರವರೆಗೆ ಓಡಾಟ ನಡೆಸಲಿದೆ. ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಯಾಗುತ್ತಿದ್ದು, ಪ್ರಯಾಣಿಕರು ತುಂಬಿದ ಬಳಿಕ ಕಡಿಯಾಳಿ, ಇಂದ್ರಾಳಿ, ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳುತ್ತಿದೆ.
ಜಿಲ್ಲಾಧಿಕಾರಿ ಕಚೇರಿ ಬಳಿ ನಿಲುಗಡೆಯಾಗುವ ಬಸ್, ಮತ್ತೆ ಅಲ್ಲಿ ಪ್ರಯಾಣಿಕರು ತುಂಬಿದ ಬಳಿಕ ಉಡುಪಿಗೆ ಪ್ರಯಾಣ ಬೆಳೆಸುತ್ತದೆ. 56 ಪ್ರಯಾಣಿಕರ ಸಾಮರ್ಥ್ಯ ಇರುವ ಈ ಬಸ್‌ನಲ್ಲಿ ಸುರಕ್ಷಿತ ಅಂತರ ಕಾಪಾಡುವ ನಿಟ್ಟಿನಲ್ಲಿ ಒಮ್ಮೇಗೆ 30 ಮಂದಿ ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
‘ಜನ ಸಂಚಾರ ವಿರಳವಾಗಿರುವುದರಿಂದ ಜಿಲ್ಲಾಧಿಕಾರಿಗಳ ಸೂಚನೆಯಂತೆ ಸದ್ಯ ಒಂದು ಬಸ್ ಮಾತ್ರ ಸಂಚಾರ ಆರಂಭಿಸಿದೆ. ಬಸ್ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದ್ದು, ಯಾವುದೇ ಹೆಚ್ಚಳ ಮಾಡಿಲ್ಲ’ ಎಂದು ಕೆಎಸ್‌ಆರ್‌ಟಿಸಿ ಉಡುಪಿ ಡಿಪೊ ಮ್ಯಾನೇಜರ್ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.