×
Ad

ಅಂಗಡಿ ತೆರೆಯಲಿಲ್ಲ ಎಂದು ಬಾಲಕಿಯ ಕೈಗಳನ್ನು ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದರು

Update: 2020-05-12 14:45 IST

ಚೆನ್ನೈ: ತನ್ನ ತಂದೆಯ ಜತೆ ವಾಸವಾಗಿದ್ದ 14 ವರ್ಷದ ಬಾಲಕಿಯೊಬ್ಬಳನ್ನು ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರು ದುಷ್ಕರ್ಮಿಗಳು ಕೈಗಳನ್ನು ಕಟ್ಟಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ದಹಿಸಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ತಿರುವೆನ್ನೈನಲ್ಲೂರೆ ಸಮೀಪದ ಸಿರಿಮದುರೈ ಎಂಬ ಗ್ರಾಮದಲ್ಲಿ ನಡೆದಿದೆ.

ಘಟನೆ ಮೇ 10ರಂದು ನಡೆದಿದ್ದರೆ ವಿಲ್ಲುಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥೀತಿಯಲ್ಲಿದ್ದ ಬಾಲಕಿ ಸೋಮವಾರ ಮೃತಪಟ್ಟಿದ್ದಾಳೆ. ಆರೋಪಿಗಳಾದ ಜಿ ಮುರುಗನ್ (52) ಹಾಗೂ ಯಾಸಗನ್ ಆಲಿಯಾಸ್ ಕೆ ಕಲಿಯಪೆರುಮಾಳ್ (60) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಎಐಎಡಿಎಂಕೆ ಪಕ್ಷದವವರಾಗಿದ್ದರೆನ್ನಲಾಗಿದ್ದು, ಬಂಧನವಾಗುತ್ತಿದ್ದಂತೆಯೇ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಮೃತ ಬಾಲಕಿ ಜಯಶ್ರೀಯ ತಂದೆ ಜಯಬಾಲ್ ಗ್ರಾಮದಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದರು. ರವಿವಾರ ಜಯಬಾಲ್ ಮನೆಯಲ್ಲಿಲ್ಲದ ಸಮಯ ಅಲ್ಲಿಗೆ ಬಂದ ಮುರುಗನ್ ಅಂಗಡಿ ಬೆಳಗ್ಗೆ ತೆರೆಯುವಂತೆ ತಾಕೀತು ಮಾಡಿದ್ದ. ಆದರೆ ತಂದೆ ಮನೆಯಲ್ಲಿಲ್ಲದ ಕಾರಣ ತಾನಾಗಿಯೇ ಅಂಗಡಿ ತೆರೆಯಲು ಬಾಲಕಿ ನಿರಾಕರಿಸಿದ್ದಳಲ್ಲದೆ ತಂದೆಯ ಜತೆ ಮಾತನಾಡುವಂತೆ ತಿಳಿಸಿದ್ದಳು. ಆ ಸಂದರ್ಭ ಮದ್ಯದ ನಶೆಯಲ್ಲಿದ್ದ ಮುರುಗನ್ ಅಲ್ಲಿಂದ ತೆರಳಿದ್ದ.

ಇದಾದ ಕೆಲವೇ ಗಂಟೆಗಳಲ್ಲಿ ಜಯಶ್ರೀ ಮನೆಯಿಂದ ಹೊಗೆಯೇಳುತ್ತಿರುವುದನ್ನು ಕಂಡು ನೆರೆಮನೆಯವರು ಅಲ್ಲಿಗೆ ಧಾವಿಸಿದಾಗ ಕೈಗಳನ್ನು ಕಟ್ಟಿ ಹಾಕಿದ ಸ್ಥಿತಿಯಲ್ಲಿದ್ದ ಬಾಲಕಿಗೆ ಬೆಂಕಿ ಹಚ್ಚಲಾಗಿರುವುದನ್ನು ಕಂಡು ಆಘಾತಗೊಂಡು ತಕ್ಷಣ ಆಕೆಯ ಮೇಲೆ ನೀರು ಸುರಿದು ಆಸ್ಪತ್ರೆಗೆ ದಾಖಲಿಸಿದ್ದರು.

ಆರೋಪಿಗಳಿಗೂ ಬಾಲಕಿಯ ಕುಟುಂಬಕ್ಕೂ ಹಗೆತನವಿತ್ತು ಎಂದು ತಿಳಿದು ಬಂದಿದೆ. ಏಳು ವರ್ಷಗಳ ಹಿಂದೆ ಮುರುಗನ್ ಮತ್ತಾತನ ಸ್ನೇಹಿತರು ಜಯಬಾಲ್‍ನ ಚಿಕ್ಕಪ್ಪನ ಕೈ ಕಡಿದ ಆರೋಪದ ಮೇಲೆ ಬಂಧಿತರಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಮುರುಗನ್ ಹಾಗೂ ಜಯಬಾಲ್ ಸಂಬಂಧಿಕರಾಗಿದ್ದರು ಹಾಗೂ ಅವರ ನಡುವೆ ಜಮೀನು ವಿವಾದವೂ ಇತ್ತು.

ಘಟನೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಇ ಕೆ ಪಳನಿಸಾಮಿ ಮೃತ ಬಾಲಕಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News