ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಹರಡುವಿಕೆ ಮೂಲ ಶೋಧನೆ ಬಿಡುವುದಿಲ್ಲ: ಸಚಿವ ಕೋಟ
ಮಂಗಳೂರು, ಮೇ 12: ದ.ಕ. ಜಿಲ್ಲೆಯಲ್ಲಿ ಕೊರೋನ ಹರಡಿರುವ ಕುರಿತಾದ ಮೂಲವನ್ನು ಪತ್ತೆ ಹಚ್ಚುವಲ್ಲಿ ತಜ್ಞರನ್ನೊಳಗೊಂಡ ಜಿಲ್ಲಾ ಮಟ್ಟದ ತಂಡ ಮಧ್ಯಂತರ ವರದಿ ನೀಡಿದೆ. ಆದರೆ ಆಸ್ಪತ್ರೆಯಲ್ಲಿ ಸೋಂಕು ಪತ್ತೆಯಾದ ಸಂದರ್ಭ ಕೇರಳ ರಾಜ್ಯದ ರೋಗಿಗಳು ಚಿಕಿತ್ಸೆ ಪಡೆದು ಬಿಡುಗಡೆಗೊಂಡಿರುವುದರಿಂದ ಆ ಬಗ್ಗೆಯೂ ಪರಿಶೀಲನೆ ಅಗತ್ಯವಾಗಿರುವುದರಿಂದ ತಂಡ ಕಾಲಾವಕಾಶ ಕೋರಿದೆ. ಆದರೆ ಮೂಲ ಶೋಧನೆ ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿಂದು ಕೊರೋನ ಸೋಂಕು ಪತ್ತೆಹಚ್ಚುವ ಕಾರ್ಯ ಯಾವ ಹಂತದಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಪ್ರಸ್ತಾಪಿಸಿದ ಬಗ್ಗೆ ಚರ್ಚೆ ನಡೆಯಿತು.
ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ಮಾತನಾಡಿ, ಮೈಕ್ರೋಬಯಾಲಜಿಸ್ಟ್ ಡಾ. ಆನಂದ್ ಅವರನ್ನೊಳಗೊಂಡ 6 ಮಂದಿಯ ತಂಡ ಪ್ರಕರಣದ ಕುರಿತಂತೆ ಮೂರು ದಿಕ್ಕಿನಲ್ಲಿ ಪರಿಶೀಲನೆ ನಡೆಸುತ್ತಿದೆ. ಬಂಟ್ವಾಳ ಕಸಬಾದ ಮೃತಪಟ್ಟ ಸೋಂಕಿತ ಮಹಿಳೆ, ಆಸ್ಪತ್ರೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕೇರಳ- ಕಾಸರಗೋಡಿನ ರೋಗಿಗಳ ಕುರಿತಂತೆಯೂ ಪರಿಶೀಲನೆ ಮಾಡಲಾಗುತ್ತಿದೆ. ಕೇರಳದಿಂದ ಮಾಹಿತಿ ಲಭ್ಯವಾಗಬೇಕಾಗಿದೆ. ರಾಜ್ಯ ಸರಕಾರ ಕೇರಳ ರಾಜ್ಯದ ಮೂಲಕ ಈ ಮಾಹಿತಿ ಯನ್ನು ಪಡೆಯಬೇಕಾಗಿದೆ ಎಂದರು.
ಶಾಸಕ ಭರತ್ ಶೆಟ್ಟಿ ಮಾತನಾಡಿ, ಸದ್ಯ ಆಸ್ಪತ್ರೆಯನ್ನು ಸೋಂಕಿನ ಮೂಲವೆಂದು ಪರಿಗಣಿಸುವುದು ಕಷ್ಟ. ಅಲ್ಲಿನ ಬೇರೆ ರೋಗಿ ಗಳು, ಸಿಬ್ಬಂದಿ, ವೈದ್ಯರಲ್ಲಿ ಸೋಂಕು ಪತ್ತೆಯಾಗಿಲ್ಲ. ಬಂಟ್ವಾಳ ಮೂಲದ ಮಹಿಳೆ ಅವರ ಸಂಬಂಧಿಕರು ಜತೆಯಲ್ಲೇ ಅಲ್ಲಿ ಚಿಕಿತ್ಸೆ ಪಡೆದ ಕೇರಳ ಮೂಲದ ರೋಗಿಗಳ ತಪಾಸಣೆ ಅಗತ್ಯವಾಗಿದೆ. ಮೂಲ ಕಂಡು ಹುಡುಕುವಲ್ಲಿ ಆ್ಯಂಟಿಬಾಡಿ ತಪಾಸಣೆ ಅಗತ್ಯವಾಗಿದ್ದು, ಸದ್ಯ ಅದಕ್ಕೆ ಐಸಿಎಂಆರ್‌ನಿಂದ ಅನುಮತಿ ಇಲ್ಲವಾಗಿದೆ. ಹಾಗಾಗಿ ಬಂಟ್ವಾಳ ಹಾಗೂ ಕಾಸರಗೋಡು ರೋಗಿ ಗಳ ಫಾರೆನ್ಸಿಕ್ ತಪಾಸಣೆ ಆಗಬೇಕು. ಸೋಂಕು ಪತ್ತೆಯಾದ ಅವಧಿಯಲ್ಲಿ ಎಷ್ಟು ಮಂದಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ, ಚಿಕಿತ್ಸೆ ಪಡೆದಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕಬೇಕಾಗಿದೆ. ಅದಕ್ಕಾಗಿ ಕಾಲಾವಕಾಶ ಅಗತ್ಯವಿದೆ ಎಂದರು.
ಆಸ್ಪತ್ರೆಗೆ ಬಂದಿರುವ ರೋಗಿಗಳ ಪಟ್ಟಿ ಇಲ್ಲವೇ ಎಂದು ಈ ಸಂದರ್ಭ ಶಾಸಕ ಯು.ಟಿ. ಖಾದರ್ ಪ್ರಶ್ನಿಸಿದರೆ, ಹಾಗಿದ್ದರೆ ಇದು ಇನ್ನೆರಡು ವರ್ಷಗಳ ಕಾಲ ತನಿಖೆ ಆಗದು ಎಂದು ಐವನ್ ಡಿಸೋಜಾ ಪ್ರತಿಕ್ರಿಯಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ, ರಾಜ್ಯ ಸರಕಾರದ ಕಾರ್ಯದರ್ಶಿಗೆ ಪತ್ರ ಮೂಲಕ ಕೇರಳ ರಾಜ್ಯದಿಂದ ಮಾಹಿತಿ ಪಡೆಯಲು ಕೋರಲವಾಗುವುದು ಎಂದರು.
ಈ ಸಂದರ್ಭ ನಮಗೆ ವೈರಸ್ ಮೇಲೆ ದ್ವೇಷವೇ ಹೊರತು ಬೇರೆ ಯಾರ ಮೇಲೂ ಅಲ್ಲ ಎಂದು ಹೇಳಿದರೆ, ಆದಷ್ಟು ಬೇಗ ಮೂಲ ಪತ್ತೆಯಾಗಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ನುಡಿದರು.
ಹೆಚ್ಚುವರಿ ವಿಮಾನ ಯಾನಕ್ಕೆ ಕೇಂದ್ರಕ್ಕೆ ಮನವಿ
ಹೊರ ದೇಶಗಳಲ್ಲಿರುವ ಕನ್ನಡಿಗರನ್ನು ಕರೆಸಲು ಹೆಚ್ಚುವರಿ ವಿಮಾನ ವ್ಯವಸ್ಥೆಯಾಗಬೇಕು. ಕೇರಳದಲ್ಲಿ ಈಗಾಗಲೇ 12 ವಿಮಾನಗಳು ನಿಗದಿಯಾಗಿವೆ. ಆದರೆ ಕರ್ನಾಟಕ್ಕೆ 2 ಮಾತ್ರ ಆಗಿರುವುದು. ಈ ಬಗ್ಗೆ ಸಂಸದರು ಕೇಂದ್ರಕ್ಕೆ ಆಗ್ರಹ ಮಾಡಬೇಕು ಎಂದರು.
ಸಂಸದ ನಳಿನ್ ಕುಮಾರ್ ಪ್ರತಿಕ್ರಿಯಿಸಿ, ರಾಜ್ಯಕ್ಕೆ ವಿದೇಶಗಳಿಂದ ಹೆಚ್ಚುವರಿ ವಿಮಾನಕ್ಕೆ ಪ್ರಯತ್ನ ಆಗಿದೆ. ಅಬುಧಾಬಿ, ಕತರ್, ಕುವೈಟ್ ಸೇರಿದಂತೆ ಗಲ್ಫ್ ರಾಷ್ಟ್ರಗಳಿಂದ ಹೆಚ್ಚಿನ ವಿಮಾನಯಾನಕ್ಕೆ ಕೇಂದ್ರ ಸಚಿವರಾದ ಸದಾನಂದ ಗೌಡರ ಚರ್ಚಿಸಲಾಗು ವುದು. ಇದೇ ವೇಳೆ ಹಡಗಿನಲ್ಲಿ ಬರುವವರಿಗೂ ವ್ಯವಸ್ಥೆಯಾಗುತ್ತಿದೆ ಎಂದು ಹೇಳಿದರು.