ಜೂನ್‌ವರೆಗೆ ವಿದ್ಯುತ್ ಸಂಪರ್ಕ ಕಡಿತ ಮಾಡುವಂತಿಲ್ಲ: ಮೆಸ್ಕಾಂಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ
ಮಂಗಳೂರು, ಮೇ 12: ವಿದ್ಯುತ್ ಬಿಲ್ ಪಾವತಿಯಾಗಿಲ್ಲವೆಂಬ ನೆಪದಲ್ಲಿ ಮುಂದಿನ ಜೂನ್ ತಿಂಗಳವರೆಗೆ ಗೃಹ ಬಳಕೆಯ ವಿದ್ಯುತ್ ಕಡಿತಗೊಳಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂಗೆ ಸೂಚನೆ ನೀಡಿದ್ದಾರೆ.
ಇದೇ ವೇಳೆ ವಿದ್ಯುತ್ ದರ ಪ್ರಥಮ ಸ್ಲಾಬ್‌ನಂತೆ 3.80 ರೂ.ಗೆ ನಿಗದಿಪಡಿಸಿ ಜನರಿಗೆ ಹೊರೆಯಾಗದಂತೆ ಪುರನ್ ಪರಿಶೀಲನೆ ಮಾಡಬೇಕು ಎಂದೂ ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ ಸಭೆಯ ಆರಂಭದಲ್ಲಿಯೇ ಮೆಸ್ಕಾಂನ ಭಾರೀ ಶುಲ್ಕದ ಕುರಿತಂತೆ ಪ್ರಸ್ತಾಪಿಸಿದ ಅವರು, ಲಾಕ್‌ಡೌನ್ ಸಂದರ್ಭ ಗೃಹ ಬಳಕೆ ಹೆಚ್ಚಿಗೆಯಾಗಿದೆ. ಶೇ. 30ರಷ್ಟು ಹೆಚ್ಚುವರಿ ಬಿಲ್ ನೀಡಲಾಗುತ್ತಿದೆ. ಎಪ್ರಿಲ್, ಮೇ ತಿಂಗಳಿಗೆ ಒಂದೇ ಬಿಲ್ ನೀಡಲಾಗಿದೆ ಎಂಬ ಜನರ ಆರೋಪಗಳ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧಿಕಾರಿ, ಗೃಹ ಬಳಕೆಯ ವಿದ್ಯುತ್ ದರವನ್ನು ಪರಾಮರ್ಶೆ ಮಾಡಿ ನೀಡಲಾಗುತ್ತಿದೆ. ಒಟ್ಟು ಬಳಕೆಗೆ ಸಂಬಂಧಿಸಿ 30 ಯುನಿಟ್‌ವರೆಗೆ 3.80 ರೂ. ದರದಲ್ಲಿ, 30 ರಿಂದ 100 ಯುನಿಟ್‌ವರೆಗೆ 5.20 ರೂ., 100-200 ಯುನಿಟ್ ಬಳಕೆಗೆ 6.75 ರೂ. ಹಾಗೂ 200ರಿಂದ ಮೇಲ್ಪಟ್ಟು 7.80 ರೂ. ದರದಲ್ಲಿ ಬಿಲ್ ನೀಡಲಾಗುತ್ತಿದೆ. ಎಪ್ರಿಲ್‌ನಲ್ಲಿ ನೀಡಿರುವುದು ಸರಾಸರಿ ಬಿಲ್. ಮೇನಲ್ಲಿ ಒಟ್ಟು ಬಿಲ್ ಕೊಟ್ಟಾಗ ಅದು ಜಾಸ್ತಿಯಾದಂತೆ ತೋರುತ್ತಿದೆ ಎಂದರು.
ನಿಮ್ಮದು ಮಾರ್ವಾಡಿ ವ್ಯಾಪಾರ ಅಲ್ಲ!
ಕೊರೋನ ಸಂಕಷ್ಟದಿಂದ ಈಗಾಗಲೇ ಕಂಗೆಟ್ಟಿರುವ ಜನಸಾಮಾನ್ಯರಿಗೆ ಈ ರೀತಿ ಸ್ಲಾಬ್ ಆಧಾರದಲ್ಲಿ ದರ ವಿಧಿಸಿ ತೊಂದರೆ ನೀಡಬಾರದು ಎಂದು ಹೇಳಿದ ಅವರು, ನೀವು ಮಾಡುತ್ತಿರುವುದು ಮಾರ್ವಾಡಿ ವ್ಯಾಪಾರ ಅಲ್ಲ ಎಂದು ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದರು.