ಮಂಗಳೂರು: ಆಟೋ ರಿಕ್ಷಾ ಬಾಡಿಗೆ ದರ ಏರಿಕೆ
ಮಂಗಳೂರು, ಮೇ 12: ತಕ್ಷಣದಿಂದ ಅನ್ವಯಗೊಳ್ಳುವಂತೆ ಆಟೋ ರಿಕ್ಷಾ ಬಾಡಿಗೆ (ಪ್ರಯಾಣ) ದರವನ್ನು ಏರಿಕೆಗೊಳಿಸಿ ಮಂಗಳೂರು ಆರ್‌ಟಿಒ ಪ್ರಕಟನೆ ಹೊರಡಿಸಿದ್ದಾರೆ.
ಈ ಹಿಂದೆ ಕನಿಷ್ಟ ದರ 25 ರೂ. ಇದ್ದುದು ಇದೀಗ 30 ರೂ.ಗೆ ಏರಿಸಲಾಗಿದೆ. 2020ರ ಫೆ.27ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರ (ಬಾಡಿಗೆ) ಏರಿಕೆ ಮಾಡಲಾಗಿತ್ತು. ಕನಿಷ್ಟ ದರ 25 ರೂ. ಇದ್ದುದನ್ನು 30ರೂ.ಗೆ ಏರಿಸಲು ಅಂದಿನ ಸಭೆಯಲ್ಲಿ ನಿರ್ಧರಿಸಲಾಗಿತ್ತು. 1 ಕಿ.ಮೀ. ನಂತರದ ಪ್ರತೀ ಕಿಲೋ ಮೀ.ಗೆ ರೂ.15 ಏರಿಕೆ ಮಾಡಲಾಗಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಏರಿಕೆಯಾದ ಬಾಡಿಗೆಯು ಜಾರಿಯಾಗಿರಲಿಲ್ಲ. ಅಲ್ಲದೆ ಆಟೋ ರಿಕ್ಷಾಗಳ ಬಾಡಿಗೆ ಮೀಟರ್ ಮಾಪನಾಂಕ ನಿರ್ಣಯ ಆಗದೆ ಇರುವುದರಿಂದ ಮತ್ತು ಅದಕ್ಕೆ ತಕ್ಕ ತಾಂತ್ರಿಕ ಡೀಲರುಗಳು ಲಭ್ಯವಿಲ್ಲದ ಕಾರಣ ಜಾರಿಯಲ್ಲಿ ವಿಳಂಬವಾಗಿತ್ತು. ಇದೀಗ ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಅಂಗೀಕರಿಸಿದ ಬಾಡಿಗೆ ದರ ಪಟ್ಟಿ ಪ್ರಕಾರ ಪ್ರಯಾಣದ ದರ ನೀಡಲು ಮಂಗಳೂರು ಆರ್‌ಟಿಒ ಸೂಚಿಸಿದ್ದಾರೆ.