ಕಾರ್ಕಳದ ತಾಯಿ-ಮಗನಿಗೆ ಕೊರೋನ ಸೋಂಕು: ಪಡೀಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ
ಮಂಗಳೂರು, ಮೇ 12: ದ.ಕ.ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಎರಡು ಕೊರೋನ ಸೋಂಕಿನ ಪಾಸಿಟಿವ್ ಪ್ರಕರಣ ದೃಢ ಗೊಂಡಿದೆ. ಇದರೊಂದಿಗೆ ದ.ಕ.ಜಿಲ್ಲೆಯಲ್ಲಿ ಈವರೆಗೆ ಒಟ್ಟು 33 ಪ್ರಕರಣವು ಪತ್ತೆಯಾದಂತಾಗಿದೆ.
ಕಾರ್ಕಳ ಮೂಲದ 50 ವರ್ಷ ಪ್ರಾಯದ ತಾಯಿ ಮತ್ತು ಅವರ 26 ವರ್ಷ ಪ್ರಾಯದ ಮಗನಿಗೆ ಸೋಂಕು ದೃಢಗೊಂಡಿವೆ. 50 ವರ್ಷದ ಮಹಿಳೆಯು ಪಡೀಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೈಕೆಯಲ್ಲಿ ಅವರ ಮಗ ಕೂಡ ತೊಡಗಿಸಿಕೊಂಡಿದ್ದರು. ಸೀಲ್‌ಡೌನ್ ಆದ ಹಿನ್ನೆಲೆಯಲ್ಲಿ ಇಬ್ಬರೂ ಈ ಆಸ್ಪತ್ರೆಯಲ್ಲೇ ಕ್ವಾರಂಟೈನ್‌ನಲ್ಲಿದ್ದರು. ಇವರ ಗಂಟಲಿನ ದ್ರವದ ಮಾದರಿಯ ಪರೀಕ್ಷಾ ವರದಿಯು ಮಂಗಳವಾರ ಬಂದಿದ್ದು, ಅದರಲ್ಲಿ ಇಬ್ಬರಿಗೂ ಸೋಂಕಿರುವುದು ದೃಢಗೊಂಡಿವೆ. ಇದೀಗ ಇಬ್ಬರನ್ನೂ ವೆನ್ಲಾಕ್-ಕೋವಿಡ್ 19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಮಂಗಳವಾರದವರೆಗೆ ದೃಢಗೊಂಡ 33 ಪಾಸಿಟಿವ್‌ಗಳ ಪೈಕಿ 25 ದ.ಕ.ಜಿಲ್ಲೆಯ ನಿವಾಸಿಗಳು, ಕಾಸರಗೋಡಿನ 4, ಕಾರ್ಕಳದ 3 ಮತ್ತು ಭಟ್ಕಳದ 1 ಪ್ರಕರಣ ಸೇರಿವೆ. ಪಾಸಿಟಿವ್‌ಗಳ ಪೈಕಿ 14 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಈಗಾಗಲೆ ಬಿಡುಗಡೆ ಗೊಂಡಿದ್ದರೆ, 16 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಪೈಕಿ 14 ಮಂದಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.
ಮನಪಾ ವ್ಯಾಪ್ತಿಯ ಕುಲಶೇಖರ-ಶಕ್ತಿನಗರದ ದ 80 ವರ್ಷದ ವೃದ್ಧೆಯು ಪಡೀಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಸಂಪರ್ಕದಿಂದ ಅವರ 50 ವರ್ಷ ಪ್ರಾಯದ ಮಗನಿಗೆ ಸೋಂಕು ತಗುಲಿತ್ತು.
ಬೋಳೂರಿನ 58 ವರ್ಷ ಪ್ರಾಯದ ಮಹಿಳೆ ಕೂಡ ಇಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗ ಎ.30ರಂದು ಸೋಂಕು ದೃಢಪಟ್ಟಿತ್ತು. ಮೇ 1ರಂದು ಈ ಮಹಿಳೆಯ 62 ವರ್ಷ ಪ್ರಾಯದ ಪತಿಗೆ ದೃಢಪಟ್ಟಿತ್ತು. ಮೇ 5ರಂದು ಇವರ 51ರ ಹರೆಯದ ಅಳಿಯನಿಗೆ ಮತ್ತು ಮೇ 6ರಂದು ಇವರ 38ರ ಹರೆಯದ ಮಗಳಿಗೆ ಹಾಗೂ 11ರ ಹರೆಯದ ಮೊಮ್ಮಗಳಲ್ಲಿ ಕೂಡ ಸೋಂಕು ಕಂಡು ಬಂದಿತ್ತು.ಕುಲಶೇಖರ-ಶಕ್ತಿನಗರದ ತಾಯಿ-ಮಗನಿಗೆ, ಬೋಳೂರಿನ ಪತ್ನಿ, ಪತಿ, ಪುತ್ರಿ, ಅಳಿಯ, ಮೊಮ್ಮಗಳು, ಕಾರ್ಕಳದ ತಾಯಿ-ಮಗನಿಗೆ ಹಾಗೂ ಬಂಟ್ವಾಳದಲ್ಲಿ ಪತ್ತೆಯಾದ ಹಲವು ಪ್ರಕರಣ ಹೀಗೆ ಸರಣಿ ಪಾಸಿಟಿವ್‌ಗಳಿಗೆ ಪಡೀಲ್‌ನ ಖಾಸಗಿ ಆಸ್ಪತ್ರೆಯೇ ಮೂಲವಾಗಿರುವುದು ಗಮನಾರ್ಹ.