×
Ad

ಮಲ್ಪೆಯಲ್ಲಿ ಭಟ್ಕಳದ ಮೀನುಗಾರು ವದಂತಿ : ಪೊಲೀಸರಿಂದ ಪರಿಶೀಲನೆ

Update: 2020-05-12 20:14 IST

ಉಡುಪಿ, ಮೇ 12: ಮಲ್ಪೆಗೆ ಭಟ್ಕಳದ ಮೀನುಗಾರರು ಬೋಟಿನ ಮೂಲಕ ಬಂದಿಳಿದಿದ್ದಾರೆಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ್ದು, ಈ ಹಿನ್ನೆಲೆಯಲ್ಲಿ ಮಲ್ಪೆ ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಮೀನು ಗಾರಿಕಾ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಮಲ್ಪೆಯಲ್ಲಿ ಯಾಂತ್ರಿಕೃತ ಮೀನುಗಾರಿಕೆ ಆರಂಭವಾಗಿ ಎರಡು ಮೂರು ದಿನಗಳಾಗಿದ್ದು, ಈ ಮಧ್ಯೆ ರಾತ್ರೋರಾತ್ರಿ ಭಟ್ಕಳದ ಮೀನುಗಾರರು ದೋಣಿ ಹಾಗೂ ಬೋಟುಗಳ ಮೂಲಕ ಮಲ್ಪೆ ಬಂದರಿಗೆ ಆಗಮಿಸಿ, ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು. ಇದರಿಂದ ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದರು.

ಈ ಬಗ್ಗೆ ಮಲ್ಪೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್, ಮಲ್ಪೆ ಕರಾವಳಿ ಕವಾಲು ಪಡೆ ಮತ್ತು ಮಲ್ಪೆ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಪರಿಶೀಲನೆ ನಡೆಸುವ ಕಾರ್ಯ ನಡೆಸಿದ್ದಾರೆ. ಅದೇ ರೀತಿ ಮಲ್ಪೆ ಮೀನು ಗಾರರ ಸಂಘದಿಂದಲೂ ಈ ಬಗ್ಗೆ ತಪಾಸಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

‘ಈ ಬಗ್ಗೆ ಮಾಹಿತಿ ಬಂದ ಕೂಡಲೇ ಕರಾವಳಿ ಕಾವಲು ಪಡೆ ಮತ್ತು ಮಲ್ಪೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.ಅವರು ಎಲ್ಲ ಕಡೆ ವಿಚಾರಣೆ ನಡೆಸಿದ್ದಾರೆ. ಆದರೆ ಎಲ್ಲೂ ಇದಕ್ಕೆ ದಾಖಲೆಗಳು ಸಿಕ್ಕಿಲ್ಲ. ಆದರೂ ಪರಿಶೀಲನೆ ಮಾಡುವ ಕೆಲಸ ಮುಂದುವರೆ ಸಲಾಗಿದೆ ಎಂದು ಸಹಾಯಕ ನಿರ್ದೇಶಕ ಶಿವಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.

‘ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಈ ಸುಳ್ಳು ವದಂತಿ ಬಗ್ಗೆ ಯಾರು ಕೂಡ ಆತಂಕ ಪಡುವ ಅಗತ್ಯ ಇಲ್ಲ. ಇದು ಕೇವಲ ಸುಳ್ಳು ಸುದ್ದಿ ಯಾಗಿದೆ. ಇದಕ್ಕೆ ಯಾರು ಕಿವಿಗೊಡಬಾರದು. ಇದು ಮಲ್ಪೆಯಲ್ಲಿ ಮೀನು ಗಾರಿಕೆ ನಿಲ್ಲಿಸಲು ಮಾಡುತ್ತಿರುವ ಷಡ್ಯಂತ್ರವಾಗಿದೆ. ಮೀನುಗಾರರು ನಿರಾಂತಕವಾಗಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು’

- ಕೃಷ್ಣ ಸುವರ್ಣ, ಅಧ್ಯ್ಷರು, ಮಲ್ಪೆ ಮೀನುಗಾರರ ಸಂಘ

ಮೀನುಗಾರಿಕೆಗೆ ಕಾರ್ಮಿಕರ ಕೊರತೆ

ಮಲ್ಪೆ ಬಂದರಿನಿಂದ ಈಗಾಗಲೇ 19 ಯಾಂತ್ರಿಕೃತ ಬೋಟುಗಳು ಮೀನು ಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ನಾಳೆಯಿಂದ ಮತ್ತೆ 30 ಬೋಟುಗಳು ಕಡಲಿಗೆ ಇಳಿಯಲಿದೆ ಎಂದು ಮಲ್ಪೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್ ತಿಳಿಸಿದ್ದಾರೆ.

ಈವರೆಗೆ ಒಟ್ಟು 152 ಬೋಟುಗಳು ಮೀನುಗಾರಿಕೆ ನಡೆಸುವುದಾಗಿ ದಾಖಲೆಗಳನ್ನು ಸಲ್ಲಿಸಿ ಪಾಸ್ ಪಡೆದುಕೊಂಡಿದ್ದು, ಮೀನುಗಾರಿಕಾ ಕಾರ್ಮಿಕರ ಕೊರತೆಯಿಂದ ಕೆಲವು ಬೋಟುಗಳು ಇನ್ನು ಕೂಡ ಮೀನುಗಾರಿಕೆ ಆಂಭಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News