ಕೊರೋನ ವಿರುದ್ಧ ಹೋರಾಟ: 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ

Update: 2020-05-12 18:50 GMT

ಹೊಸದಿಲ್ಲಿ,ಮೇ 12: ಮಂಗಳವಾರ ರಾತ್ರಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದಲ್ಲಿ ಮತ್ತು ಭಾರತದಲ್ಲಿ ಕೋವಿಡ್-19 ಸ್ಥಿತಿಯ ಕುರಿತು ಮಾತನಾಡಿದರು. ಇದೇ ವೇಳೆ ದೇಶವನ್ನು ಸ್ವಾವಲಂಬಿಯಾಗಿಸಲು 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜನ್ನು ಅವರು ಘೋಷಿಸಿದರು.

‘ವಿಶೇಷ ಆರ್ಥಿಕ ಪ್ಯಾಕೇಜ್ ಇತ್ತೀಚಿನ ಆರ್‌ಬಿಐ ನಿರ್ಧಾರಗಳನ್ನು ಒಳಗೊಂಡಿದೆ ಮತ್ತು ಭಾರತದ ಜಿಡಿಪಿಯ ಸುಮಾರು ಶೇ.10 ರಷ್ಟಾಗಿದ್ದು,ಇದನ್ನು ನಮ್ಮ ಕಾರ್ಮಿಕರು,ರೈತರು,ಪ್ರಾಮಾಣಿಕ ತೆರಿಗೆದಾತರು,ಎಂಎಸ್‌ಎಂಇಗಳು ಮತ್ತು ಗುಡಿ ಕೈಗಾರಿಕೆಗಳಿಗಾಗಿ ರೂಪಿಸಲಾಗಿದೆ. ಅದು ಭೂಮಿ,ಶ್ರಮ,ದ್ರವ್ಯತೆ ಮತ್ತು ಕಾನೂನುಗಳಿಗೆ ಹೆಚ್ಚಿನ ಒತ್ತು ನೀಡಲಿದೆ. ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರದಿಂದ ವಿಶೇಷ ಆರ್ಥಿಕ ಪ್ಯಾಕೇಜಿನ ವಿವರಗಳನ್ನು ಪ್ರಕಟಿಸಲಿದ್ದಾರೆ ’ಎಂದು ಅವರು ಹೇಳಿದರು.

‘ವಿಶ್ವವು ಕಳೆದ ನಾಲ್ಕು ತಿಂಗಳುಗಳಿಂದಲೂ ಕೊರೋನ ವೈರಸ್ ಬಿಕ್ಕಟ್ಟಿನ ವಿರುದ್ಧ ಹೋರಾಡುತ್ತಿದೆ. 40 ಲಕ್ಷಕ್ಕೂ ಅಧಿಕ ಜನರು ವೈರಸ್‌ನಿಂದ ಸೋಂಕಿತರಾಗಿದ್ದು,ಎರಡೂವರೆ ಲಕ್ಷಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ಭಾರತೀಯರೂ ತಮ್ಮ ಕುಟುಂಬದ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಅವರಿಗೆ ನನ್ನ ಸಂತಾಪಗಳು. ಒಂದು ವೈರಸ್ ಇಡೀ ವಿಶ್ವವನ್ನೇ ನಾಶಗೊಳಿಸಿದೆ ’ಎಂದು ತನ್ನ 33 ನಿಮಿಷಗಳ ಭಾಷಣದಲ್ಲಿ ಹೇಳಿದ ಮೋದಿ,‘ಇದೊಂದು ಅಭೂತಪೂರ್ವ ಬಿಕ್ಕಟ್ಟು ಆಗಿದೆ. ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕು ಮತ್ತು ಅದೇ ವೇಳೆ ಮುಂದೆ ಸಾಗಲೂಬೇಕು. 21ನೇ ಶತಮಾನ ಭಾರತಕ್ಕೆ ಸೇರುವಂತಾಗಲು ದೇಶವನ್ನು ಸ್ವಾವಲಂಬಿಯಾಗಿಸುವುದು ಏಕಮಾತ್ರ ಮಾರ್ಗವಾಗಿದೆ. ಭಾರತವನ್ನು ಸ್ವಾವಲಂಬಿಯಾಗಿಸುವುದು ವಿಶ್ವದ ಸಂತೋಷ,ಸಹಕಾರ ಮತ್ತು ಶಾಂತಿ ಕುರಿತ ಕಳವಳಗಳನ್ನು ನಿವಾರಿಸುತ್ತದೆ ’ಎಂದರು.

ಕೊರೋನ ವೈರಸ್ ಬಿಕ್ಕಟ್ಟಿಗೆ ಮೊದಲು ಭಾರತವು ವೈಯಕ್ತಿಕ ರಕ್ಷಣಾ ಉಪಕರಣ (ಪಿಪಿಇ)ಗಳನ್ನು ತಯಾರಿಸುತ್ತಿರಲಿಲ್ಲ ಮತ್ತು ಹೆಸರಿಗೆ ಮಾತ್ರ ಎನ್-95 ಮಾಸ್ಕ್‌ಗಳನ್ನು ತಯಾರಿಸುತ್ತಿತ್ತು. ಆದರೆ ಈಗ ದೇಶದಲ್ಲಿ ತಲಾ ಎರಡು ಲಕ್ಷ ಪಿಪಿಇಗಳು ಮತ್ತು ಎನ್-95 ಮಾಸ್ಕ್‌ಗಳು ತಯಾರಾಗುತ್ತಿವೆ ಎಂದ ಪ್ರಧಾನಿ,ಭಾರತದಿಂದ ಪೂರೈಕೆಯಾಗಿರುವ ಔಷಧಿಗಳು ಕೋವಿಡ್-19ರ ವಿರುದ್ಧ ಜೀವನ್ಮರಣ ಹೋರಾಟವನ್ನು ನಡೆಸುತ್ತಿರುವ ವಿಶ್ವದಲ್ಲಿ ಹೊಸ ಆಶಾಕಿರಣವನ್ನು ಸೃಷ್ಟಿಸಿದೆ. ಭಾರತವು ಸಂಪನ್ಮೂಲಗಳು ಮತ್ತು ಪ್ರತಿಭೆಯನ್ನು ಹೊಂದಿದೆ,ಅದು ಅತ್ಯುತ್ತಮ ಉತ್ಪನ್ನಗಳನ್ನು ತಯಾರಿಸುತ್ತದೆ,ಗುಣಮಟ್ಟವನ್ನು ಮತ್ತು ಪೂರೈಕೆ ಸರಣಿಯನ್ನು ಉತ್ತಮಗೊಳಿಸುತ್ತದೆ ಎಂದರು.

ಭಾರತದ ಸ್ವಾವಲಂಬನೆಯು ಆರ್ಥಿಕತೆ,ಮೂಲಸೌಕರ್ಯ,ತಂತ್ರಜ್ಞಾನ ಆಧಾರಿತ ವ್ಯವಸ್ಥೆ,ಚೈತನ್ಯಶಾಲಿ ಜನಸಮುದಾಯ ಮತ್ತು ಬೇಡಿಕೆ ಇವುಗಳನ್ನು ಆಧರಿಸಿರುತ್ತದೆ ಎಂದು ಮೋದಿ ನುಡಿದರು.

ಸ್ವದೇಶಿ ಮಂತ್ರವನ್ನು ಪಠಿಸಿದ ಅವರು,‘ಈ ಬಿಕ್ಕಟ್ಟಿನ ಘಳಿಗೆಯಲ್ಲಿ ಸ್ಥಳೀಯ ತಯಾರಕರು ನಮ್ಮ ಬೇಡಿಕೆಗಳನ್ನು ಪೂರೈಸಿದ್ದಾರೆ. ಹೀಗಾಗಿ ಸ್ಥಳೀಯ ಬ್ರಾಂಡ್ ಪರ ಧ್ವನಿಯೆತ್ತುವಂತೆ,ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಂತೆ ಮತ್ತು ಅವುಗಳ ಬಗ್ಗೆ ಪ್ರಚಾರ ಮಾಡುವಂತೆ ನಾನು ಭಾರತೀಯರನ್ನು ಕೋರಿಕೊಳ್ಳುತ್ತಿದ್ದೇನೆ’ಎಂದರು.

‘ಕೊರೋನ ವೈರಸ್ ಸುದೀರ್ಘ ಕಾಲ ನಮ್ಮ ಬದುಕಿನ ಭಾಗವಾಗಿರಲಿದೆ,ಆದರೆ ನಮ್ಮ ಬದುಕು ಅದರ ಸುತ್ತಲೇ ಗಿರಕಿ ಹೊಡೆಯುತ್ತಿರಲು ಅವಕಾಶ ನೀಡದಿರೋಣ ’ಎಂದ ಪ್ರಧಾನಿ,ಮೇ 18ರಿಂದ ದೇಶವ್ಯಾಪಿ ಲಾಕ್‌ಡೌನ್ 4.0 ಜಾರಿಯಾಗಲಿದೆ ಮತ್ತು ಇದು ವಿಭಿನ್ನವಾಗಿರಲಿದೆ,ಹೊಸ ನಿಯಮಗಳನ್ನು ಹೊಂದಿರಲಿದೆ. ವಿವರಗಳನ್ನು ಮೇ 18ಕ್ಕೆ ಮುನ್ನ ಪ್ರಕಟಿಸಲಾಗುವುದು ಎಂದರು.

‘ಆತ್ಮನಿರ್ಭರ್ ಭಾರತ ಅಭಿಯಾನ’ವನ್ನು ಘೋಷಿಸಿದ ಪ್ರಧಾನಿ,ಸ್ವಾವಲಂಬನೆಯ ಈ ಯುಗವು ನಮ್ಮ ಹೊಸ ಶಪಥ,ಹೊಸ ಉತ್ಸವವಾಗಲಿದೆ. ಹೊಸ ನಿರ್ಧಾರದೊಡನೆ ನಾವು ಮುಂದೆ ಸಾಗಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News