ಮಂಗಳೂರಿಗೆ ಹೊರಟ ಮೊದಲ ವಿಮಾನ : ದುಬೈಯಿಂದ ಉಡುಪಿಗೆ 62 ಮಂದಿ
ಉಡುಪಿ, ಮೇ 12: ಕೊರೋನ ಕಾರಣಕ್ಕಾಗಿ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂ ಡಿರುವ ಭಾರತೀಯರನ್ನು ವಿಶೇಷ ವಿಮಾನಗಳಲ್ಲಿ ಭಾರತಕ್ಕೆ ಕರೆಸಿಕೊಳ್ಳುವ ಕಾರ್ಯಾಚರಣೆಯಡಿ ಇಂದು ರಾತ್ರಿ ದುಬಾಯಿಯಿಂದ ಮಂಗಳೂರಿಗೆ ಆಗಮಿಸುವ 177 ಮಂದಿ ಕನ್ನಡಿಗರಲ್ಲಿ ಉಡುಪಿ ಜಿಲ್ಲೆಗೆ ಸೇರಿದ 62 ಮಂದಿ ಇರುವ ಬಗ್ಗೆ ಮಾಹಿತಿ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇವರೆಲ್ಲರೂ ಮಂಗಳವಾರ ರಾತ್ರಿ 10ಗಂಟೆಯ ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಅವರನ್ನು ನೇರವಾಗಿ ಉಡುಪಿಗೆ ಕರೆತರಲಾಗುತ್ತಿದೆ. ಎಲ್ಲರೂ ಉಡುಪಿ ಬಸ್‌ನಿಲ್ದಾಣದ ಬಳಿ ಇರುವ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಒಟ್ಟು ಸೇರಲಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಉಡುಪಿಯಲ್ಲಿ ಅವರ ಆರೋಗ್ಯ ತಪಾಸಣೆ ನಡೆಯಲಿದ್ದು, ಬಳಿಕ ಅವರವರ ಇಚ್ಛೆಯಂತೆ ಅವರನ್ನು ಉಡುಪಿ ಜಿಲ್ಲಾ ಕೇಂದ್ರದಲ್ಲಿ ಅಥವಾ ಅವರವರು ಬಯಸಿದ ತಾಲೂಕು ಕೇಂದ್ರಗಳಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗುವುದು. ಇದಕ್ಕಾಗಿ ಈಗಾಗಲೇ ಉಡುಪಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಹೊಟೇಲ್‌ಗಳನ್ನು ಗುರುತಿಸಲಾಗಿದೆ.
ಸದ್ಯ ಉಡುಪಿಯಲ್ಲಿ ಹೊಟೇಲ್ ಕಿದಿಯೂರು, ಜನಾರ್ದನ ಹೊಟೇಲ್ ಹಾಗೂ ಮಧುರಾ ಕಂಫರ್ಟ್ ಹೊಟೇಲ್‌ಗಳನ್ನು ಕ್ವಾರಂಟೈನ್‌ಗೆ ಗುರುತಿಸಲಾಗಿದೆ. ವಿದೇಶದಿಂದ ಬಂದವರು ಬಯಸಿದ ಹೊಟೇಲ್‌ನಲ್ಲಿ ಅವರ ಸ್ವಂತ ಖರ್ಚಿನಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗುತ್ತದೆ ಎಂದೂ ಅವರು ಹೇಳಿದರು.