ನೈವೇಲಿ ಬಾಯ್ಲರ್ ಸ್ಫೋಟ ಪ್ರಕರಣ: ಗಾಯಾಳು ಕಾರ್ಮಿಕರಿಬ್ಬರ ಮೃತ್ಯು

Update: 2020-05-12 15:11 GMT

ಹೊಸದಿಲ್ಲಿ,ಮೇ 12: ಕಳೆದ ವಾರ ತಮಿಳುನಾಡಿನ ನೈವೇಲಿಯಲ್ಲಿರುವ ಸರಕಾರಿ ಸ್ವಾಮ್ಯದ ಎನ್‌ಎಲ್‌ಸಿ ಇಂಡಿಯಾದ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ್ದ ಬಾಯ್ಲರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಎಂಟು ಕಾರ್ಮಿಕರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಓರ್ವ ಈಗಲೂ ಚಿಂತಾಜನಕ ಸ್ಥಿತಿಯಲ್ಲಿದ್ದು,ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕಂಪನಿಯ ಸಿಎಂಡಿ ರಾಕೇಶ ಕುಮಾರ ಅವರು ಮಂಗಳವಾರ ತಿಳಿಸಿದ್ದಾರೆ.

ಮೃತರ ಕುಟುಂಬಗಳಿಗೆ ತಲಾ ಕನಿಷ್ಠ 15 ಲ.ರೂ.ಪರಿಹಾರವನ್ನು ನೀಡುವಂತೆ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರು ಆದೇಶಿಸಿದ್ದಾರೆ. ಪರಿಹಾರದ ಜೊತೆಗೆ ಕಂಪನಿಯು ಕುಟುಂಬದ ಓರ್ವರಿಗೆ ಉದ್ಯೋಗವನ್ನೂ ನೀಡಲಿದೆ.

ಕಂಪನಿಯ ಆಡಳಿತ ವಿಭಾಗದ ಹಿರಿಯ ಅಧಿಕಾರಿಗಳು ತಮ್ಮ ಒಂದು ದಿನದ ವೇತನವನ್ನು ಮೃತರ ಕುಟುಂಬಗಳಿಗೆ ನೀಡಲಿದ್ದಾರೆ ಮತ್ತು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಕಂಪನಿಯೇ ಭರಿಸಲಿದೆ ಎಂದು ಕುಮಾರ ತಿಳಿಸಿದರು.

ಕಂಪನಿಯು ಅವಘಡದ ತನಿಖೆಗಾಗಿ ಕೇಂದ್ರ ವಿದ್ಯುತ್ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಎಸ್.ಬಕ್ಷಿ ಅವರನ್ನು ನಿಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News