ಉಡುಪಿ ಜಿಲ್ಲೆಯಲ್ಲಿ 20 ಕೆಎಸ್ಸಾರ್ಟಿಸಿ, 16 ಖಾಸಗಿ ಬಸ್‌ಗಳ ಓಡಾಟ
ಉಡುಪಿ, ಮೇ 12: ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಸರಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ಬುಧವಾರದಿಂದ ಪುನರಾರಂಭಗೊಳ್ಳಲಿದೆ. ಪ್ರಾರಂಭದಲ್ಲಿ 20 ಕೆಎಸ್ಸಾರ್ಟಿಸಿ ಹಾಗೂ 16 ಖಾಸಗಿ ಬಸ್‌ಗಳು ಹಲವು ಷರತ್ತುಗಳ ನಡುವೆ ತಮ್ಮ ಸಂಚಾರ ವನ್ನು ಪ್ರಾರಂಭಿಸಲಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಎಸ್ಸಾರ್ಟಿಸಿ ಉಡುಪಿ ಘಟಕದ ವ್ಯವಸ್ಥಾಪಕರು ಹಾಗೂ ಉಡುಪಿಯ ಭಾರತಿ ಮೋಟಾರ್ಸ್‌ನ ಮಾಲಕರು ಬಸ್ಸುಗಳನ್ನು ಓಡಿಸಲು ಅನುಮತಿ ನೀಡುವಂತೆ ಕೋರಿ ಬರೆದ ಪತ್ರದ ಹಿನ್ನೆಲೆಯಲ್ಲಿ ಕೊರೋನ ಮುಂಜಾಗ್ರತಾ ಕ್ರಮದ ಹಲವು ಷರತ್ತು ಗಳೊಂದಿಗೆ ಅನುಮತಿಯನ್ನು ನೀಡಲಾಗಿದೆ ಎಂದವರು ತಿಳಿಸಿದ್ದಾರೆ.
ಈ ಬಸ್ಸುಗಳ ಜಿಲ್ಲೆಯಾದ್ಯಂತ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಸಂಚರಿಸಲಿವೆ. ನಾಳೆ ಸಂಚರಿಸಲಿರುವ ಕೆಎಸ್ಸಾರ್ಟಿಸಿ ಬಸ್‌ಗಳ ರೂಟು ಹಾಗೂ ಸಂಖ್ಯೆ ಹೀಗಿವೆ.
ಉಡುಪಿಯಿಂದ ಕುಂದಾಪುರ-4 ಬಸ್ಸುಗಳು, ಉಡುಪಿಯಿಂದ ಹೆಬ್ರಿ-1, ಉಡುಪಿಯಿಂದ ಕಾರ್ಕಳ-3, ಉಡುಪಿಯಿಂದ ಕಾಪು ಮಲ್ಲಾರು-1, ಕುಂದಾಪುರದಿಂದ ಬೈಂದೂರು-2, ಉಡುಪಿಯಿಂದ ಮಣಿಪಾಲ-2, ಉಡುಪಿಯಿಂದ ಬಾರ್ಕೂರು ಸಿದ್ಧಾಪುರ-2, ಉಡುಪಿಯಿಂದ ಅಲೆವೂರು-1, ಉಡುಪಿಯಿಂದ ಮಲ್ಪೆ-1, ಉಡುಪಿಯಿಂದ ಹೂಡೆ-1, ಉಡುಪಿಯಿಂದ ಬ್ರಹ್ಮಾವರ-2 ಬಸ್ಸುಗಳ ಓಡಲಿವೆ.
ಅದೇ ರೀತಿ ಭಾರತಿ ಮೋಟಾರ್ಸ್ ಒಟ್ಟು 16 ಬಸ್ಸುಗಳ ಓಡಾಟಕ್ಕೆ ಪರವಾನಿಗೆಯನ್ನು ಪಡೆದುಕೊಂಡಿದ್ದು, ಅದಕ್ಕೆ ದೊರಕಿರುವ ಪರವಾನಿಗೆ ಮಾರ್ಗ ಹಾಗೂ ವೇಳಾಪಟ್ಟಿಯಂತೆ ಸಂಚರಿಸಲಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಸ್ಸುಗಳು ಆಸನ ಸಾಮರ್ಥ್ಯದ ಶೇ.50ರಷ್ಟು ಪ್ರಯಾಣಿಕರನ್ನು ಮಾತ್ರ ಸಾಗಿಸಬಹುದು. ನಿಂತು ಪ್ರಯಾಣಿಸಲು ಅವಕಾಶವಿಲ್ಲ. ಬೆಳಗ್ಗೆ 7ರಿಂದ ಸಂಜೆ 7ರ ನಡುವಿನ ಅವಧಿಯಲ್ಲಿ ಮಾತ್ರ ಸಂಚರಿಸಲು ಅವಕಾಶವಿದೆ. ಆರ್‌ಟಿಎ ನಿಗದಿಪಡಿಸಿದ ಟಿಕೆಟ್ ದರ ವನ್ನು ಮಾತ್ರ ಪಡೆಯಬೇಕು ಎಂದು ಷರತ್ತಿನಲ್ಲಿ ತಿಳಿಸಲಾಗಿದೆ.
ದಿನದ ಸಂಚಾರ ಆರಂಭಿಸುವ ಮೊದಲು, ಪ್ರತಿ ಟ್ರಿಪ್ ಹಾಗೂ ದಿನದ ಸಂಚಾರ ಮುಗಿದ ನಂತರ ಬಸ್ಸುಗಳನ್ನು ಕಡ್ಡಾಯವಾಗಿ ಸ್ಯಾನಟೈಸ್ ಮಾಡಬೇಕು. ಬಸ್ಸಿನಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ಸುರಕ್ಷಿತ ಅಂತರ ಕಾಪಾಡುವಂತೆ ನೋಡಿಕೊಳ್ಳಬೇಕು. ಬಸ್ ಸಿಬ್ಬಂದಿಗಳು ಸಹ ಮಾಲ್ಕ್, ಗ್ಲೌಸ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ಮಾತ್ರ ಬಸ್ಸುಗಳು ಸಂಚರಿಸಬೇಕೆಂದು ಜಿಲ್ಲಾಧಿಕಾರಿಗಳು ಬಸ್‌ಗಳಿಗೆ ವಿಧಿಸಿರುವ ಷರತ್ತಿನಲ್ಲಿ ತಿಳಿಸಿದ್ದಾರೆ.